ಬೀಡಿ ಕಾರ್ಮಿಕ ಕನಿಷ್ಟ ವೇತನ, ತುಟ್ಟಿಭತ್ಯೆ ಕಡಿತಕ್ಕೆ ವಿರೋಧ: ಸರಕಾರದ ಆದೇಶ ಪ್ರತಿ ಸುಟ್ಟು ಬೀಡಿ ಕಾರ್ಮಿಕರಿಂದ ಪ್ರತಿಭಟನೆ
ಉಡುಪಿ, ಎ.30: ಬೀಡಿ ಕಾರ್ಮಿಕ ಕನಿಷ್ಟ ವೇತನ ಹಾಗೂ ತುಟ್ಟಿಭತ್ಯೆಯನ್ನು ಕಡಿತಗೊಳಿಸಿದ ಸರಕಾರದ ಕ್ರಮವನ್ನು ಖಂಡಿಸಿ ಇಂದು ಬೀಡಿ ಎಂಡ್ ಟ್ಯೋಬ್ಯಾಕೋ ಲೇಬರ್ ಯೂನಿಯನ್ ನೇತೃತ್ವದಲ್ಲಿ ಉಡುಪಿಯ ತಹಶಿಲ್ದಾರರ ಕಛೇರಿ ಮುಂದೆ ಸರಕಾರದ ಆದೇಶ ಪ್ರತಿ ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಯಿತು.
ಇಂದಿನ ಬೆಲೆ ಏರಿಕೆಯನ್ನು ಪರಿಗಣಿಸದೆ ಈಗಿದ್ದ ಪ್ರತಿ ಸಾವಿರ ಬಿಡಿಯ ಈಗಿನ ವೇತನ 331ರೂ.ನಿಂದ 270ರೂ.ಗೆ ಇಳಿಕೆ ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಈ ಆದೇಶ ಹಿಂಪಡೆದು, ಸರಕಾರ ಬೀಡಿ ಕಾರ್ಮಿಕರ ಹಿತದೃಷ್ಟಿಯಿಂದ ಪ್ರತಿ ಸಾವಿರ ಬೀಡಿಗೆ 395ರೂ. ಕನಿಷ್ಟ ವೇತನ ನಿಗದಿಪಡಿಸಿ, ಹೊಸ ಆದೇಶ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಬೀಡಿ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಸಿಗಬೇಕಾದ ಆರೋಗ್ಯ ಸಹಾಯ, ಮನೆ ಸಹಾಯ ಹಾಗೂ ವಿದ್ಯಾರ್ಥಿವೇತನ ನಿರಂತರ ಸಿಗುವಂತೆ ವ್ಯವಸ್ಥೆ ಮಾಡಬೇಕು. ಜಿ.ಎಸ್.ಟಿ. ರೂಪದಲ್ಲಿ ಸಂಗ್ರಹ ವಾಗುವ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಪಾಲಿನ ಸೆಸ್‌ನ ಪಾಲನ್ನು ತಕ್ಷಣ ನೀಡಿ, ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಿ, ಕಾರ್ಮಿಕರಿಗೆ ಸವಲತ್ತು ಒದಗಿಸಬೇಕು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಕುರಿತ ಮನವಿಯನ್ನು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ನೀಡಲಾಯಿತು. ಪ್ರತಿಭಟನಾ ಸಭೆಯಲ್ಲಿ ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಅಖಿಲ ಭಾರತ ಬೀಡಿ ಫೆಡರೇಶನ್ ಯೂನಿಯನ್ ಕೇಂದ್ರ ಸಮಿತಿ ಸದಸ್ಯರಾದ ಕವಿರಾಜ್ ಎಸ್.ಕಾಂಚನ್, ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ ಶಶಿಧರ ಗೋಲ್ಲ, ಸಮಿತಿ ಸದಸ್ಯರಾದ ಗಿರಿಜ, ವಸಂತಿ, ಶಾರದ ಉಪಸ್ಥಿತರಿದ್ದರು.