×
Ad

ಮಕ್ಕಳಿಗೆ ಸಂಸ್ಕೃತಿಯ ಶಿಕ್ಷಣ ಅತ್ಯಗತ್ಯ: ಪೇಜಾವರಶ್ರೀ

Update: 2025-04-30 22:02 IST

ಬ್ರಹ್ಮಾವರ, ಎ.30: ದೇಶದ ಪ್ರತಿಯೊಬ್ಬ ಮಗುವೂ ಸತ್ಪ್ರಜೆಯಾಗಿ ಬೆಳೆಯಲು ಈ ನೆಲದ ಸಂಸ್ಕೃತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬುಧವಾರ ಹೇಳಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಚೇರ್ಕಾಡಿ ಗ್ರಾಮದ ಕೇಶವ ನಗರದ ರಾಣಿ ಅಬ್ಬಕ್ಕ ರಸ್ತೆಯಲ್ಲಿ ನಿರ್ಮಾಣಗೊಂಡ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ (ಸಿಬಿಎಸ್‌ಇ) ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಕಟ್ಟಡಗಳ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು.

ದೇಶದ ಅಂತ:ಸ್ಸತ್ವ ಕುಗ್ಗುತ್ತಿದ್ದು, ಇದನ್ನು ತಡೆಗಟ್ಟಿ ಮಾತೃಭೂಮಿ ರಕ್ಷಿಸಲು ನೆಲ, ಜಲ, ಆಚಾರ, ವಿಚಾರ, ಕಲೆಯ ನೆಲೆಯಲ್ಲಿ ಪ್ರೀತಿಸುವ, ಗೌರವಿಸುವ ದೊಡ್ಡ ಪಡೆಯನ್ನು ನಿರ್ಮಿಸಲು ಇಂಥ ಸಂಸ್ಕೃತಿಯ ಶಿಕ್ಷಣ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೊದ ಮಾಜಿ ಅಧ್ಯಕ್ಷ ಡಾ. ಎಸ್.ಸೋಮನಾಥ್ ಮಾತನಾಡಿ, ಚಂದ್ರಯಾನ 3 ಭಾರತ ವಿಜ್ಞಾನ ತಂತ್ರಜ್ಞಾನದ ಶಕ್ತಿಯಾಗಿದ್ದು ಪುನರುತ್ಥಾನದ ಬಾಗಿಲು ತೆರೆದಿದೆ. ನಾವು ವಿಶ್ವಗುರುವಾಗುವ ಹಾದಿಯಲ್ಲಿ ಶಾಂತಿಯುತ, ಏಕತೆ, ಸೌಹಾರ್ದದ ಭಾರತೀಯ ಬದುಕಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ವಿದ್ಯಾದಾನ ಭಾರತದ ಮಣ್ಣಿನ ಗುಣ. ಪರಕೀಯರ ದಾಳಿಯಿಂದ ಭಾರತೀಯ ಶಿಕ್ಷಣ ಹಾಳಾಗಿದೆ. ಜಗತ್ತಿಗೆ ಲಕ್ಷಾಂತರ ವಿದ್ವಾಂಸರನ್ನು ನೀಡಿದ ಭಾರತದ ಶಿಕ್ಷಣ ಭೌತಿಕ, ಆಧ್ಯಾತ್ಮಿಕ ಜೀವನದ ವಿಕಸನಕ್ಕೆ ಪೂರಕವಾಗಿದೆ ಎಂದು ನುಡಿದರು.

ಉದ್ಯಮಿ ಸಾಧು ಸಾಲಿಯಾನ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಂಚಾಲನಾ ಸಮಿತಿ ಸದಸ್ಯ ವಿಶ್ವನಾಥ್, ಕಾರ್ಯದರ್ಶಿ ಋಷಿರಾಜ್ ಉಪಸ್ಥಿತರಿದ್ದರು. ವಾಸ್ತುಶಿಲ್ಪಿ ಮೈಸೂರಿನ ಅಶ್ವಿನ್ ಕುಮಾರ್, ಅತುಲ್ ಗೋಪಿನಾಥ್‌ರನ್ನು ಗೌರವಿಸಲಾಯಿತು.

ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಭಾಗ್ಯಶ್ರೀ ಐತಾಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಸ್ಮಿತಾ ಮತ್ತು ನಂದಿನಿ ಕಾರ್ಯಕ್ರಮ ನಿರೂಪಿಸಿ ಪೂರ್ಣಿಮಾ ವಂದಿಸಿದರು. ಪ್ರದೀಪ್ ಶಾಂತಿ ಮಂತ್ರ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News