ನೇಮೋತ್ಸವದಲ್ಲಿ ಭಾಗಿಯಾಗಿ ಸೌಹಾರ್ದತೆ ಮೆರೆದ ಕೈಸ್ತ ಧರ್ಮಗುರು
ಮಲ್ಪೆ, ಮೇ 3: ಇಲ್ಲಿನ ಬಡಾನಿಡಿಯೂರು ತೊಟ್ಟಂ ತಿಮ್ಮ ಪೂಜಾರಿ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಚಿಕ್ಕಮ್ಮದೇವಿ ಸಹಿತ ಪರಿವಾರ ದೈವಗಳ ಪುನರ್‌ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯ ಕ್ರಮಕ್ಕೆ ಭೇಟಿ ನೀಡುವ ಮೂಲಕ ಸ್ಥಳೀಯ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರುಗಳಾದ ವಂ. ಡೆನಿಸ್ ಡೆಸಾ ಸೌಹಾರ್ದತೆಗೆ ಸಾಕ್ಷಿಯಾದರು.
ದೈವಸ್ಥಾನದ ಪದಾಧಿಕಾರಿಗಳ ಆಹ್ವಾನದ ಮೇರೆಗೆ ಭೇಟಿ ನೀಡಿದ ಧರ್ಮಗುರುಗಳು, ನೇಮೋತ್ಸವದ ವೇಳೆ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು. ಹಾಗೂ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಶುಭಕೋರಿದರು. ದೈವಸ್ಥಾನದ ವತಿಯಿಂದ ಧರ್ಮಗುರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಈ ವೇಳೆ ಸ್ಥಳೀಯ ಮುಖಂಡರಾದ ರಮೇಶ್, ಉಮೇಶ್, ತಿಮ್ಮ ಪೂಜಾರಿ ಕುಟುಂಬಸ್ಥರು, ತೊಟ್ಟಂ ಚರ್ಚಿನ ಅಂತರ್‌ಧರ್ಮಿಯ ಆಯೋಗದ ಸಂಚಾಲಕರಾದ ಆಗ್ನೆಲ್ ಫೆರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್, ರೈಮಂಡ್ ಫೆರ್ನಾಂಡಿಸ್, ನಿಕೋಲಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.