ಒಳಮೀಸಲಾತಿ ಸಮೀಕ್ಷೆ ವೇಳೆ ಆಧಾರ್ ಕಾರ್ಡ್ ತೋರಿಸಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ: ಪರಿಶಿಷ್ಟ ಜಾತಿ ಒಳಮೀಸಲಾತಿಗಾಗಿ ಮೇ 5ರಿಂದ 17ರವರೆಗೆ ನಡೆಯುವ ಮನೆ ಮನೆ ಸಮೀಕ್ಷೆ ವೇಳೆ ಕುಟುಂಬದ ಯಾರಾದರೂ ಒಬ್ಬರು ಗಣತಿದಾರರಿಗೆ ಆಧಾರ್ ಕಾರ್ಡ್ ಅಥವಾ ಕುಟುಂಬದ ಪಡಿತರ ಚೀಟಿಯನ್ನು ತೋರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಒಳಮೀಸಲಾತಿಗಾಗಿ ನಡೆಯಲಿರುವ ಮನೆಮನೆ ಸಮೀಕ್ಷೆ ಕುರಿತಂತೆ ವಿವರಿಸಲು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗಾಗಿಯೇ ಈ ಸಮೀಕ್ಷೆ ನಡೆಯಲಿರುವುದರಿಂದ ಪ್ರತಿಯೊಬ್ಬರೂ ಗೊತ್ತಿದ್ದರೆ ಉಪಜಾತಿ ಯನ್ನು ಸಮೀಕ್ಷೆ ವೇಳೆ ನಮೂದಿಸಬೇಕು ಎಂದರು.
ಪರಿಶಿಷ್ಟ ಜಾತಿಯಲ್ಲಿ ಕೇಂದ್ರ ಸರಕಾರ 101 ಉಪಜಾತಿಗಳನ್ನು ಗುರುತಿಸಿದೆ. ಇವುಗಳಲ್ಲಿ ಯಾವುದೇ ಉಪಜಾತಿಗೆ ಸೇರಿದ್ದರೂ ಅದನ್ನು ನಮೂದಿಸುವಂತೆ ಅವರು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಜಾತಿಯನ್ನು ಹೆಚ್ಚಾಗಿ ಎಲ್ಲರೂ ನಮೂದಿಸುತ್ತಾರೆ. ಈ ಬಾರಿ ಯಾವುದೇ ಉಪಜಾತಿ ನಮೂದಿಸಲು ಅವಕಾಶವಿದೆ. ನೀವು ಹೇಳಿದ ಜಾತಿಯನ್ನು ಮಾತ್ರ ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ನಡೆಯುವ ಸಮೀಕ್ಷೆಯಲ್ಲಿ ನಮೂದಿಸಲಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶಗಳನ್ನು ಸಂಗ್ರಹಿಸಲು ಶಾಲಾ ಶಿಕ್ಷಕರಿಂದ ಮನೆಮನೆ ಸಮೀಕ್ಷೆ ನಡೆಸಲು ಸರಕಾರ ಆದೇಶಿಸಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಮೇ5ರಿಂದ 17ರವರೆಗೆ ಮನೆಮನೆ ಸಮೀಕ್ಷೆ ನಡೆಯಲಿದೆ. ಮತದಾರರ ಪಟ್ಟಿಯ ಆಧಾರದಲ್ಲಿ ಪರಿಶಿಷ್ಟ ಜಾತಿಗಳ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಜಿಲ್ಲೆಯ 1,112 ಬೂತ್‌ಗಳಲ್ಲಿ 1,112 ಶಾಲಾ ಶಿಕ್ಷಕರನ್ನು ಗಣತಿದಾರರಾಗಿ ನೇಮಿಸಲಾಗಿದೆ. ಇವರ ಮೇಲ್ವಿಚಾರಣೆಗೆ 112 ಮೇಲ್ವಿಚಾರಕ ರನ್ನು ಸಹ ನೇಮಿಸಲಾಗಿದೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.
ಸಮೀಕ್ಷೆಗಾಗಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಎರಡು ತರಬೇತಿ ನೀಡಲಾ ಗಿದೆ. ಗಣತಿದಾರರಿಗೂ ತಾಲೂಕು ಮಟ್ಟದಲ್ಲಿ ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಿಂದ ತರಬೇತಿ ನೀಡಲಾಗಿದೆ. ಸಮೀಕ್ಷೆ ಬರುವವರಲ್ಲಿ ಜನರು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಜಿಲ್ಲಾದಿಕಾರಿಗಳು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯನ್ನು ಜಿಲ್ಲಾ ಮಟ್ಟದಲ್ಲಿ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಡುಪಿ, ಕಾಪು ಹಾಗೂ ಕಾರ್ಕಳ ತಾಲೂಕು ಮಟ್ಟದ, ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ತಾಲೂಕುಗಳಿಗೆ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ ಎಂದೂ ಅವರು ವಿವರಿಸಿದರು.
ಸಮೀಕ್ಷೆಯನ್ನು ಮೊಬೈಲ್ ಆ್ಯಪ್‌ನಲ್ಲಿ ಎರಡು ಹಂತಗಳಲ್ಲಿ ನಡೆಸಲಾಗು ತ್ತದೆ. ಮೇ 5ರಿಂದ 17ರವರೆಗೆ ಸಮೀಕ್ಷೆದಾರರು ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಂಡು ಮಾಹಿತಿ ಸಂಗ್ರಹಿಸುವರು. ಬಳಿಕ ಮೇ 9ರಿಂದ 21ರವರೆಗೆ ಮನೆ ಭೇಟಿ ಸಂದರ್ಭದಲ್ಲಿ ಬಿಟ್ಟು ಹೋದ ಪ.ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಕ್ಕೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಾಗುತ್ತದೆ. ನಂತರವೂ ಬಿಟ್ಟು ಹೋದವರಿಗೆ 25ರವರೆಗೆ ಆನ್‌ಲೈನ್ ಮೂಲಕ ಸ್ವಯಂಘೋಷಣೆ ಅಪ್‌ಲೋಡ್ ಮಾಡಲು ಅವಕಾಶವಿದೆ ಎಂದೂ ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.