×
Ad

ಕೊಲ್ಲೂರು: ಕೊರಗ ಮಹಿಳೆ ಮನೆ ದ್ವಂಸ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹ

Update: 2025-05-03 22:03 IST

ಕುಂದಾಪುರ, ಮೇ 3: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆಯಲ್ಲಿ ಕೊರಗ ಸಮುದಾಯದ ಮಹಿಳೆ ಗಂಗೆ ಎಂಬವರ ಮನೆ ದ್ವಂಸ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಉಡುಪಿ ಜಿಲ್ಲಾ ದಲಿತ ಮುಖಂಡರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಬಡವರ ಬದುಕಿನ ಮೇಲೆ ಚೆಲ್ಲಾಟವಾಡುವ ಪ್ರಭಾವಿಗಳಿಗೆ ಕಾನೂನು ಭಯ ಉಂಟಾಗಬೇಕಾದರೆ ಇವರ ಬಂಧನವಾಗಲೇಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಗದಾಂಬ ಟ್ರಸ್ಟ್ ನಡೆಸುವ ಪರಮೇಶ್ವರ ಅಡಿಗ ಎಂಬವರು ಕಳೆದ ಎ.17ರಂದು ಗಂಗೆ ಕೊರಗ ಕುಟುಂಬ ವಾಸವಿದ್ದ ಮನೆಯನ್ನು ತನ್ನ ಜಗದಾಂಬ ಟ್ರಸ್ಟ್ ಗೆ ಸೇರಿದ ಜಮೀನು ಎಂದು ನಕಲಿ ದಾಖಲೆ ಗಳನ್ನು ಸೃಷ್ಟಿಸಿ ಜೆಸಿಬಿ ಯಂತ್ರದ ಮೂಲಕ ರಾಜಾರೋಷವಾಗಿ ಧ್ವಂಸ ಮಾಡಿದ್ದು, ಕಿಂಚಿತ್ತೂ ಮಾನವೀ ಯತೆ ಇಲ್ಲದ ಈ ವರ್ತನೆಯಿಂದ ತಳ ಸಮುದಾಯಕ್ಕೆ ಸೇರಿದ ಬಡ ಕೊರಗ ಕುಟುಂಬವೊಂದು ಬದುಕು ಕಳೆದುಕೊಂಡು ಬೀದಿಗೆ ಬರುವಂತಾಗಿ ಇಡೀ ಜಿಲ್ಲಾಡಳಿತವೇ ತಲೆತಗ್ಗಿಸುವಂತಾಗಿತ್ತು ಎಂದು ಹೇಳಿಕೆ ತಿಳಿಸಿದೆ.

ಇದೀಗ ಪ್ರಕರಣ ನಡೆದು ಎರಡು ವಾರಗಳ ನಂತರ ಗಂಗೆ ಕೊರಗ ನೀಡಿದ ದೂರಿನಂತೆ ಜಗದಾಂಬ ಟ್ರಸ್ಟ್‌ನ ಪರಮೇಶ್ವರ ಅಡಿಗ ಹಾಗು ಸಂಬಂಧಿಸಿದವರ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಮಾನವೀಯತೆ ಇಲ್ಲದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಉಡುಪಿ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ದಲಿತ ಮುಖಂಡರು, ಜನಪರ ಹೊರಾಟಗಾರ ಜಯನ್ ಮಲ್ಪೆ, ಪ.ಜಾತಿ/ ಪ.ಪಂಗಡ ಗುತ್ತಿಗೆದಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಅಂಬೇಡ್ಕರ್ ಯುವ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕೆಡಿಪಿ ಸದಸ್ಯ ನರಸಿಂಹ ಹಳಗೇರಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ್ ಉಪ್ಪುಂದ, ಬೈಂದೂರು ಸಂಚಾಲಕ ಲಕ್ಷ್ಮಣ ಕುಂದಾಪುರ ಸಂಚಾಲಕ ನಾಗರಾಜ್ ಸಟ್ವಾಡಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News