ಶಾರದಾ ಎ ಅಂಚನ್ ತುಳು ಕಾದಂಬರಿಗೆ ‘ಪಣಿಯಾಡಿ ಪ್ರಶಸ್ತಿ’
ಉಡುಪಿ: ತುಳುಕೂಟ ಉಡುಪಿ ಪ್ರತಿ ವರ್ಷ ಎಸ್.ಯು. ಪಣಿಯಾಡಿ ನೆನಪಿನಲ್ಲಿ ತುಳು ಕಾದಂಬರಿಗೆ ನೀಡುವ ಪ್ರಶಸ್ತಿಗೆ ಮುಂಬೈ ನಿವಾಸಿ ಶಾರದಾ ಎ ಅಂಚನ್ ಕೊಡವೂರು ಅವರ ‘ಅಕೇರಿದ ಎಕ್ಕ್’ ಕಾದಂಬರಿ ಆಯ್ಕೆಯಾಗಿದೆ.
ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಎಸ್.ಯು.ಪಣಿಯಾಡಿ ಸಾಧನೆಯ ನೆನಪಿನಲ್ಲಿ ತುಳುಕೂಟ ಉಡುಪಿ ಕಳೆದ 30 ವರ್ಷಗಳಿಂದ ಪಣಿಯಾಡಿ ಪ್ರಶಸ್ತಿ ನೀಡುತ್ತಿದೆ.
ಹಿರಿ ಪತ್ರಕರ್ತ ನಿತ್ಯಾನಂದ ಪಡ್ರೆ, ಸುಲೋಚನಾ ಪಚ್ಚಿನಡ್ಕ ಹಾಗು ಪುತ್ತಿಗೆ ಪದ್ಮನಾಭ ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ಶಾರದಾ ವಿ.ಅಂಚನ್ ಅವರ ತುಳು ಕಾದಂಬರಿ ಹಸ್ತಪ್ರತಿಯನ್ನು ಆಯ್ಕೆ ಮಾಡಿದೆ.
ಶಾರದಾ ಅಂಚನ್ ಅವರು ಮೂಲತಃ ಉಡುಪಿಯ ಕೊಡವೂರಿನವರು. ಸಾಹಿತ್ಯ ವಲಯದಲ್ಲಿ ಚಿರಪರಿಚಿತರು. ಇವರು ನವೀ ಮುಂಬಯಿಯ ಎಂ. ಜಿ.ಎಂ. ಮೆಡಿಕಲ್ ಕಾಲೇಜಿನಲ್ಲಿ ರಕ್ತನಿಧಿ ತಂತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳು ಹಾಗು ಕನ್ನಡದಲ್ಲಿ ಇವರ 18 ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ಹಲವು ಪ್ರತಿಷ್ಠಿತ ಪುರಸ್ಕಾರಗಳು ಇವರಿಗೆ ಲಭಿಸಿವೆ.
ಪಣಿಯಾಡಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹಾಗು ಕಾರ್ಯದರ್ಶಿ ಗಂಗಾಧರ ಕಿದಿಯೂರ್ ಮತ್ತು ಪಣಿಯಾಡಿ ಪ್ರಶಸ್ತಿಯ ಸಂಚಾಲಕಿ ಶಿಲ್ಪಾ ಜೋಶಿ ತಿಳಿಸಿದ್ದಾರೆ.