ರಾಜ್ಯದ ಕಲೆ, ಸಂಸ್ಕೃತಿ, ಕ್ಷೇತ್ರದಲ್ಲಿ ಉಡುಪಿ ಕೊಡುಗೆ ಅಪಾರ: ಟಿ.ಶ್ಯಾಮ್ ಭಟ್
ಉಡುಪಿ, ಮೇ 4: ಸಾಂಸ್ಕೃತಿಕ ಕೇಂದ್ರ ಉಡುಪಿ ಜಿಲ್ಲೆಯು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದ್ದಾರೆ.
ರಂಗಭೂಮಿ ಉಡುಪಿ ವತಿಯಿಂದ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ‘ರಂಗಭೂಮಿ ಆನಂದೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಡಾ.ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್ ಪೈ ಅವರಿಗೆ ಪ್ರದಾನ ಮಾಡಲಾ ಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಉಡುಪಿ ರಂಗಭೂಮಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಹಲವಾರು ಅವಕಾಶಗಳಿವೆ. ವಿದೇಶಿ ಫಂಡಿಂಗ್‌ಗಳ ಮೂಲಕ ಕಲೆ ಹಾಗೂ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಮುಂದಾಗಬೇಕು ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ರೆಸಿಡೆನ್ಶಿಯಲ್ ಸ್ಕೂಲ್‌ನ ವಿದ್ಯಾವಂತ ಆಚಾರ್ಯ ಅಭಿನಂದನ ಮಾತುಗಳನ್ನಾಡಿದರು. ತಲ್ಲೂರು ಟ್ರಸ್ಟ್‌ನ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಉದಯ್ ಕುಮಾರ್ ಕೆ., ಉದ್ಯಮಿ ಪುರುಷೋತ್ತಮ ಶೆಟ್ಟಿ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ರಂಗಭೂಮಿ ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ್‌ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.
ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಡಾ.ವಿಷ್ಣುಮೂರ್ತಿ ಪ್ರಭು ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಯನ ನಾಟಕ ಮನೆ ಮಂಗಳೂರು ತಂಡದಿಂದ ಅಶ್ವತ್ಥಾಮ ನಾಟಕ ಪ್ರದರ್ಶನಗೊಂಡಿತು.