ಮಲ್ಪೆ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾದವರಿಗೆ ಸದ್ಗತಿಗಾಗಿ ತರ್ಪಣ
ಉಡುಪಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ವರಿಗೆ ಮಲ್ಪೆ ಕಡಲ ತೀರದಲ್ಲಿ ಉಡುಪಿಯ ಅಭಿನವ ಭಾರತ ಎಂಬ ಸಂಘಟನೆ ಸಾಂಪ್ರದಾಯಿಕ ರೀತಿಯಲ್ಲಿ ತರ್ಪಣ ನೀಡಿ, ಹೋಮ ನಡೆಸಿ ನೊಂದ ಕುಟುಂಬದ ಜೊತೆಗಿರುವ ಸಂದೇಶ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ನರಮೇಧದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯಿತಲ್ಲದೇ, ಹೋಮ ಮತ್ತು ತರ್ಪಣ ನೀಡುವ ಮೂಲಕ ಅಪರ ಧಾರ್ಮಿಕ ವಿಧಿಯನ್ನು ಉಡುಪಿ ಸಮೀಪದ ಮಲ್ಪೆಯ ಕಡಲ ತೀರದಲ್ಲಿ ನಡೆಸಲಾಯಿತು.
ಮಲ್ಪೆಯ ಹನೂಮಾನ್ ವಿಠೋಭ ರುಕುಮಾಯಿ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಎಲ್ಲಾ ವಿಧಿಗಳು ನೆರವೇರಿದವು. ಘಟನೆಯಲ್ಲಿ ಮೃತಪಟ್ಟ 25 ಜನ ಹಿಂದೂಗಳ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆಗೈದು ಹೋಮವನ್ನು ನೆರವೇರಿಸಲಾಯ್ತು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳ ನೇತೃತ್ವದಲ್ಲಿ, ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಗೀತಾ ತ್ರಿಷ್ಟುಪ್ ಹೋಮ ನೆರವೇರಿಸಿ ಪೂರ್ಣಾಹುತಿ ಮಾಡಲಾಯ್ತು. ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಸಿಗಲಿ, ಕುಟುಂಬಕ್ಕೆ ನೋವು ಕಡಿಮೆಯಾಗಿ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯ್ತು.
ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳು ಮಾತನಾಡಿ, ಸಮಾಜದಲ್ಲಿ ಒಬ್ಬರಿಗೊಬ್ಬರು ಆಗಬೇಕು ಜೊತೆಯಾಗಿ ಸಮಷ್ಠಿ ಭಾವ ಬರಬೇಕು. ವೈದಿಕ, ಉಪನಿಷತ್ತು ಕಾಲದ ವ್ಯವಸ್ಥೆ ಪುನರ್ಜೀವ ಆಗಬೇಕು. ಉಪನಿಷತ್ತು ಕಾಲದ ಸಮಷ್ಟಿ ಭಾವ ಬಂದರೆ ಚಂದ. ದೇಶದ ಬೇರೆ ಬೇರೆ ಕಡೆಯ ಜನ ಪಹಲ್ಗಾಮ್‌ನಲ್ಲಿ ಮರಣ ಹೊಂದಿದ್ದಾರೆ. ಅವರಿಗೆಲ್ಲರಿಗೂ ಸದ್ಗತಿ ಸಿಗಲಿ. ಪಾರಮಾರ್ಥಿಕ ಭಾವದಿಂದ ಒಳ್ಳೆಯ ಮನಸ್ಸಿನಿಂದ ಯುವಕರು ಎರಡು ಕೈಯಲ್ಲಿ ಸಮುದ್ರದ ನೀರನ್ನು ತರ್ಪಣ ನೀಡಿದ್ದಾರೆ. ಸಮಷ್ಟಿ ಭಾವದಿಂದ ಗೀತಾ ತ್ರಿಷ್ಟುಪ್ ಹೋಮ ಮಾಡಲಾಗಿದೆ ಎಂದರು.
25 ಮಂದಿ ಮೃತರ ಜನ್ಮಸ್ಥಾನ, ಜಾತಿ ಗಮನಕ್ಕೆ ತೆಗೆದುಕೊಳ್ಳದೆ ಸಮಷ್ಟಿ ಭಾವದಿಂದ ಅವರಿಗೆಲ್ಲ ರಿಯೂ ಸದ್ಗತಿ ನೀಡುವ ಕ್ರಿಯೆ ಮಾಡಿದ್ದೇವೆ ಎಂದರು. ಅಭಿನವ ಭಾರತ ಸೊಸೈಟಿ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, 25 ಕುಟುಂಬಗಳ ಪರವಾಗಿ ಹಿಂದೂ ಸಂಘಟನೆ ಗಳ 25 ಯುವಕರು ಈ ಅಪರ ಕ್ರಿಯೆಯ ವಿಧಿಯನ್ನು ನೆರವೇರಿಸಿದರು. ಸಂಘಟನೆಯೊಂದರ ಮುಖಂಡ ಶ್ರೀಕಾಂತ ಶೆಟ್ಟಿ ಕಾರ್ಯಕ್ರಮದ ಆಯೋಜಕರಾಗಿದ್ದರು.
ನೂರಾರು ಸಾರ್ವಜನಿಕರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ಹನುಮಾನ್ ರುಕುಮಾಯಿ ವಿಠೋಭಾ ಮಂದಿರದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.