×
Ad

ಪಠ್ಯಪುಸ್ತಕ, ಪುಸ್ತಕಗಳ ರವಾನೆಗೆ ‘ಜ್ಞಾನ ಅಂಚೆ’ ಹೊಸ ಸೇವೆ ಆರಂಭ

Update: 2025-05-05 21:42 IST

ಉಡುಪಿ: ಪಠ್ಯಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರುವ ಭಾರತೀಯ ಅಂಚೆ ಇಲಾಖೆಯ ‘ಜ್ಞಾನ ಅಂಚೆ’ ಸೇವೆ ಇದೇ ಮೇ 1ರಿಂದ ಆರಂಭವಾಗಿದೆ.

ಈ ಮೊದಲು ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್‌ಗಳ ಮೂಲಕ ಕಳುಹಿಸಬೇಕಿತ್ತು. ಭಾರತೀಯ ಅಂಚೆ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರುವ ಮೂಲಕ ಬುಕ್ ಪ್ಯಾಕೆಟ್ ಸೇವೆಯನ್ನು 2024ರ ಜೂನ್‌ನಲ್ಲಿ ರದ್ದುಪಡಿಸಲಾಗಿತ್ತು.

ಈಗ ಭಾರತೀಯ ಅಂಚೆ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರ, ಜ್ಞಾನ ಅಂಚೆ ಸೇವೆ ಆರಂಭಕ್ಕೆ ಮುಂದಾಗಿದ್ದು, ಪಠ್ಯಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಬಿಲ್ ಬುಕ್‌ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ.

ಈ ಸೇವೆ ಅಡಿ ಪುಸ್ತಕಗಳನ್ನು ಕಳುಸುವವರು ಅದರ ಮೇಲೆ ‘ಜ್ಞಾನ ಅಂಚೆ’ ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕಳುಹಿಸುವವರು ಮತ್ತು ಪಡೆಯುವವರ ಜೊತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸ ನಮೂದಿಸಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ ಇರಬಾರದು. ಗರಿಷ್ಠ ೫ ಕೆಜಿವರೆಗಿನ ಪಾರ್ಸಲ್‌ಗಳನ್ನು ಮಾತ್ರ ‘ಜ್ಞಾನ ಅಂಚೆ’ ಎಂದು ಪರಿಗಣಿಸಲಾಗುತ್ತದೆ ಎಂದು ಉಡುಪಿ ಅಂಚೆ ಇಲಾಖೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News