ಆಪರೇಷನ್ ಸಿಂಧೂರ: ಭಾರತೀಯ ಸೇನೆಯನ್ನು ಬೆಂಬಲಿಸಿ ವಿಶಿಷ್ಟ ಕಾರ್ಯಕ್ರಮ
ಉಡುಪಿ: ಭಾರತೀಯ ಸೇನೆ ಪೆಹಲ್ಗಾಮ್ ಹತ್ಯಾಕಾಂಡ ವಿರುದ್ಧ ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆ ಮೂಲಕ ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಯನ್ನು ಬೆಂಬಲಿಸುವ ವಿಶಿಷ್ಟ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಯೋಜಿಸಿತು.
ನಗರದ ಮಾರುತಿ ವಿಥಿಕಾ ರಸ್ತೆಯಲ್ಲಿ ನಾಗರಿಕ ಸಮಿತಿಯ ಸದಸ್ಯರು, ಮಿತ್ರ ಸ್ಕೂಲ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು 20 ಅಡಿ ಅಗಲ ಹಾಗೂ 14 ಅಡಿ ಉದ್ದದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ರಾಷ್ಟ್ರ ಧ್ವಜವನ್ನು ಮೆರವಣಿಗೆ ಮೂಲಕ ಚಿತ್ತರಂಜನ್ ಸರ್ಕಲ್‌ನಿಂದ ಮೈತ್ರಿ ಸರ್ಕಲ್‌ವರೆಗೆ ಕೊಂಡೊಯ್ಯಲಾಯಿತು.
ಈ ಸಂದರ್ಭದಲ್ಲಿ ಜೈಕಾರ ಹಾಕಿ ಸೇನೆಯ ಕಾರ್ಯಾಚರಣೆಗೆ ಬೆಂಬಲ ನೀಡಲಾಯಿತು. ಕೊನೆಯಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು. ನಾಗರಿಕ ಸಮಿತಿಯ ಪ್ರಮುಖರಾದ ತಾರನಾಥ ಮೇಸ್ತ, ರಾಜೇಶ್ ಶೇಟ್, ಸುಧಾಕರ್, ವಿನಾಯಕ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
‘ಅಮಾಯಕರ ಜೀವ ಬಲಿ ಪಡೆದ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ನಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಇಂತಹ ಸಂದರ್ಭ ದಲ್ಲಿ ಸೇನೆ ಜೊತೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆ ನಿಟ್ಟಿನಲ್ಲಿ ಈ ವಿಶಿಷ್ಠ ಕಾರ್ಯಕ್ರಮವನ್ನು ನಡೆಸಲಾಗಿದೆ’ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.