‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ: ಸಮುದ್ರ ತೀರದಲ್ಲಿ ಕರಾವಳಿ ಕಾವಲು ಪೊಲೀಸರಿಂದ ಕಣ್ಗಾವಲು
ಮಲ್ಪೆ, ಮೇ 7: ಕಾಶ್ಮೀರದ ಪಹಲ್ಗಾಮ್ ಘಟನೆಗೆ ಪ್ರತ್ಯುತ್ತರವಾಗಿ ನಡೆದ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಮಲ್ಪೆ ಸೇರಿದಂತೆ ಕರ್ನಾಟಕ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕರಾವಳಿ ಕಾವಲು ಪೊಲೀಸರಿಂದ ವಿಶೇಷ ಕಣ್ಗಾವಲು ಇರಿಸಲಾಗುತ್ತಿದೆ.
ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 324 ಕಿ.ಮೀ. ಉದ್ದದ ಕರ್ನಾಟಕ ಕರಾವಳಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ್, ಹೆಜಮಾಡಿ, ಹೊನ್ನಾವರ, ಬೆಲೆಕೇರಿ, ಗಂಗೊಳ್ಳಿಗಳಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಗಳಿವೆ. ಈ ಎಲ್ಲ ಠಾಣೆ ಗಳ ವ್ಯಾಪ್ತಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 340ಕ್ಕೂ ಅಧಿಕ ಸಿಬ್ಬಂದಿಗಳಿದ್ದು, 180 ಮಂದಿ ಕರಾವಳಿ ನಿಯಂತ್ರಣ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 13 ಬೋಟುಗಳು ಮತ್ತು ಜೆಟ್‌ಸ್ಕೀಗಳ ಮೂಲಕ ನಿರಂತರ ಗಸ್ತು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಕಾವಲು ಪೊಲೀಸ್ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಪಹಲ್ಗಾಮ್ ಘಟನೆಯ ಬಳಿಕ ನಮ್ಮ ಪೊಲೀಸರು ಅಲರ್ಟ್ ಆಗಿದ್ದಾರೆ. ಇದೀಗ ಇನ್ನಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಕಾರವಾರದಲ್ಲಿ ಇಂದು ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಸಮುದ್ರದಲ್ಲಿ ಸಂಚರಿಸುವ ಬೋಟುಗಳನ್ನು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ರೀತಿಯಲ್ಲಿ ತಪಾಸಣೆ ಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ನಮ್ಮಲ್ಲಿರುವ ಬೋಟುಗಳಲ್ಲಿ ಶಿಫ್ಟ್ ಮೂಲಕ ನಿರಂತರ ಗಸ್ತು ತಿರುಗಲಾಗುತ್ತಿದೆ. ಅದೇ ರೀತಿ ಈ ರೀತಿ ಇಂದು ಮಲ್ಪೆಯಲ್ಲಿ ಸಭೆ ಕರೆದು ಚರ್ಚಿಸಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಬೋಟುಗಳನ್ನು ತಪಾಸಣೆ ಕಾರ್ಯ ಮಾಡಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಬೋಟುಗಳಿಗೆ ದಂಡ ವಿಧಿಸಲಾಗಿದೆ. ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡಬಂದರೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.