ಪ್ರೊ.ಹೆರಂಜೆ ಕೃಷ್ಣ ಭಟ್ ನಿಧನ
ಉಡುಪಿ, ಮೇ 8: ಉಡುಪಿಯ ಹಿರಿಯ ಸಾಂಸ್ಕೃತಿಕ ಅಧ್ವರ್ಯು, ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ಟರು (84) ಗುರುವಾರ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರೊ.ಭಟ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರ ರನ್ನು ಅಗಲಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಭಟ್ಟರು, ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ದೊಂದಿಗೆ ಪ್ರಾದೇಶಿಕ ಸಂಶೋಧನ ಕೇಂದ್ರ (ಆರ್‌ಆರ್‌ಸಿ) ಹಾಗೂ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದ ನಿರ್ದೇಶಕರಾಗಿಯ ಕಾರ್ಯ ನಿರ್ವಹಿಸಿದ್ದರು.
ಬ್ರಹ್ಮಾವರ ತಾಲೂಕಿನ ಹೆರಂಜೆಯವರಾದ ಕೃಷ್ಣ ಭಟ್, ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಪ್ರೊ.ಕು.ಶಿ. ಹರಿದಾಸ ಭಟ್ಟರ ಗರಡಿಯಲ್ಲಿ ಪಳಗಿದ್ದ ಕೃಷ್ಣ ಭಟ್ಟರು, ಗುರುವಿನಂತೆ ತಾವೂ ಧೀಮಂತ ಸಾಂಸ್ಕೃತಿಕ ಸಂಘಟಕರಾಗಿ ರೂಪುಗೊಂಡಿದ್ದರು. ಸುಮಾರು 5 ದಶಕಗಳ ಉಡುಪಿಯ ಅನೇಕ ಪರ್ಯಾಯೋತ್ಸಗಳು, ವಾದಿರಾಜ ಕನಕದಾಸ ಸಂಗೀತೋತ್ಸವ ಸೇರಿದಂತೆ ಹತ್ತಾರು ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ, ಉತ್ಸವಗಳ ನೇತೃತ್ವ ವಹಿಸಿ ಯಶಸ್ವಿಗೊಳಿಸಿದ್ದರು.
ಜಾನಪದ ಸಂಶೋಧನ ಕೇಂದ್ರದ ಮೂಲಕ ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜನಪದೀಯ ಕಲೆಗಳ ದಾಖಲೀಕರಣವೂ ಭಟ್ಟರ ಮಾರ್ಗದರ್ಶನ ದಲ್ಲೇ ನಡೆದಿದ್ದವು. ಇವರ ಸಂಪಾದಕತ್ವದಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಹತ್ತಾರು ಗ್ರಂಥಗಳು ಪ್ರಕಟಗೊಂಡಿದ್ದವು. ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳೂ ನಡೆದಿದ್ದವು.
ಸಂತಾಪ: ಪುತ್ತಿಗೆ, ಕೃಷ್ಣಾಪುರ,ಪೇಜಾವರ, ಕಾಣಿಯೂರು, ಅದಮಾರು ಪಲಿಮಾರು, ಸೋದೆ, ಶೀರೂರು, ಭಂಡಾರಕೇರಿ ಮಠಗಳ ಶ್ರೀಪಾದರು ಕೃಷ್ಣ ಭಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಯಶ್ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ ರಘುಪತಿ ಭಟ್ , ಡಾ.ಮೋಹನ ಆಳ್ವಾ ಮುಂತಾದವರೂ ಸಹ ರೊ.ಭಟ್ಟರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶುಕ್ರವಾರ ಅಂತ್ಯಕ್ರಿಯೆ: ಪ್ರೊ. ಕೃಷ್ಣಭಟ್ಟರ ಅಂತ್ಯಕ್ರಿಯೆಯು ನಾಳೆ 10:30ರ ಸುಮಾರಿಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಿಗ್ಗೆ 9ರಿಂದ 10:00ರವರೆಗೆ ವಿಬುಧಪ್ರಿಯ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.