×
Ad

ಯುವ ಜನರಿಗೆ ಮಾನವೀಯತೆಯ ಅರಿವು ಅಗತ್ಯ: ಡಾ.ವಾಣಿಶ್ರೀ ಐತಾಳ್

Update: 2025-05-09 19:40 IST

ಕುಂದಾಪುರ, ಮೇ 9: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಜೆಸಿಐ ಕುಂದಾಪುರ ಸಿಟಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ದಿನದ ಪ್ರಯುಕ್ತ ಮಾನವೀಯತೆಯ ಸನಿಹದಲ್ಲಿ ಮತ್ತು ಆರೋಗ್ಯ ಜಾಗೃತಿ ಕುರಿತು ಕಾರ್ಯಕ್ರಮ ಜರಗಿತು.

ಮಣಿಪಾಲದ ತಪೋವನ ಲೈಫ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ಎ.ಎಂ.ಎಸ್‌ನ ಎಂ.ಡಿ. ಫೇಜ್‌ನ ಸಲಹೆಗಾರರಾದ ಡಾ.ವಾಣಿಶ್ರೀ ಐತಾಳ್ ಮಾತನಾಡಿ, ಈಗಿನ ಯುವ ಜನರಿಗೆ ಮಾನವೀಯತೆಯ ಅರಿವು ಅಗತ್ಯ. ಇತ್ತೀಚಿನ ಮಕ್ಕಳು ಹೆಚ್ಚು ಅಂತರ್ಮುಖಿಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಅದರೊಂದಿಗೆ ಶಿಷ್ಟಾಚಾರ, ಸಂಸ್ಕಾರವನ್ನು ಕಲಿಸಬೇಕು. ಹಾಗೆಯೇ ಸಮತೋಲನದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಚಾರವನ್ನು ತಿಳಿಸಿದರು.

ಕುಂದಾಪುರದ ಭಾರತೀಯ ರೆಡ್ ಕ್ರಾಸ್ಸೊಸೈಟಿಯ ಕಾರ್ಯದರ್ಶಿ ಶ್ರೀಯುತ ಸತ್ಯನಾರಾಯಣ ಪುರಾಣಿಕ್ರವರು ಮಾನವೀಯತೆಯು ಇಂದು ಜನರಲ್ಲಿ ಕಡಿಮೆಯಾಗುತ್ತಿದೆ. ಮಾನವೀಯತೆಯ ಜಾಗೃತಿಯನ್ನು ಮೂಡಿಸಲು ರೆಡ್ ಕ್ರಾಸ್ಸಂಸ್ಥೆಯುಕೈಕೊಂಡ ವಿಚಾರಗಳನ್ನು ತಿಳಿಸಿದರು.

ಕುಂದಾಪುರ ಸಿಟಿ ಅಧ್ಯಕ್ಷ ಜೆಸಿಯು ಯುಸೂಫ್ ಖಲೀಲ್ ಮಾತನಾಡಿ, ಇಂದಿನ ಯುವಜನರು ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳದೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸರಿಯಾದ ಆಹಾರ ಸೇವನೆಯನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂಶುಪಾಲೆ ಪ್ರೊಫೆಸರ್ ಶಬೀನಾ ಎಚ್. ಮಾತನಾಡಿ, ಶಿಕ್ಷಣ ಮಾತ್ರ ಜೀವನವಲ್ಲ, ಯಶಸ್ಸು ಪಡೆಯ ಬೇಕಾದರೆ ಮಾನವೀಯತೆ ಅತೀ ಮುಖ್ಯ. ಅದನ್ನು ಬೆಳೆಸಿಕೊಳ್ಳಬೇಕು. ಎಲ್ಲರಿಂದಲೂ ದೇಶದಗಡಿಯಲ್ಲಿ ನಿಂತು ಸೇವೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಇರುವ ಸ್ಥಳದಲ್ಲಿ ಸಮಾಜಕ್ಕೆ ಸಣ್ಣ ಪುಟ್ಟ ಸೇವೆ ಯನ್ನು ಮಾಡುವುದೇ ದೇಶ ಸೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ, ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕೋಶಾಧಿಕಾರಿ ಶಿವರಾಮ ಶೆಟ್ಟಿ, ಜೆಸಿಐ ಕುಂದಾಪುರ ನಗರದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್, ಜೆಸಿಐ ಕುಂದಾಪುರ ನಗರದ ಕಾರ್ಯದರ್ಶಿ ಕಿರಣ್ ದೇವಾಡಿಗ, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಅಹಮದ್ ಖಲೀಲ್ ಮತ್ತು ಜಾಸ್ಮಿನ್ ಫೆರ್ನಾಂಡೀಸ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತೃತೀಯ ಬಿಸಿಎ ವಿದ್ಯಾರ್ಥಿನಿ ಬುಷ್ರ ಅಂಜುಂ ಪರಿಚಯಿಸಿದರು. ಕಾಲೇಜಿನ ಉಪನ್ಯಾಸಕ ಜಾಸ್ಮಿನ್ ಫೆರ್ನಾಂಡಿಸ್ ಸ್ವಾಗತಿಸಿದರು. ಅಹಮ್ಮದ್ ಖಲೀಲ್ ವಂದಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಮಿಸ್ಬಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News