×
Ad

ಜಾತಿಗಣತಿಗೆ ಲಿಂಗಾಯತ ಸಚಿವರಿಂದ ಒಮ್ಮತದ ತೀರ್ಮಾನ: ಸಚಿವೆ ಹೆಬ್ಬಾಳ್ಕರ್

Update: 2025-05-10 18:39 IST

ಕಾಪು: ಜಾತಿಗಣತಿಗೆ ಸಂಬಂಧಿಸಿದಂತೆ ೭ ಜನ ಲಿಂಗಾಯತ ಸಚಿವರು ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಒಟ್ಟಾಗಿ ನಮ್ಮ ತೀರ್ಮಾನವನ್ನು ಒಂದು ಪತ್ರದಲ್ಲಿ ಬರೆದು ಎಲ್ಲರೂ ಸಹಿ ಹಾಕಿ ಮುಖ್ಯ ಮಂತ್ರಿಗಳಿಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕಾಪುವಿನ ಪುರಾಣ ಪ್ರಸಿದ್ಧ ಮಾರಿಯಮ್ಮನವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡುತಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲ ಮಂದಿ ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಸಂದೇಶಗಳನ್ನು ಹರಡುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಥ ಸಮಾಜ ಘಾತುಕ ಶಕ್ತಿಗಳು ಭಾರತದಲ್ಲಿ ಇರಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ನಡಿಕೆರೆ ರತ್ನಾಕರ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ದಿನೇಶ್ ಹೆಗಡೆ, ಸುನೀಲ್ ಬಂಗೇರ, ನವೀನ ಚಂದ್ರ, ದೀಪಕ್ ಕೋಟ್ಯಾನ ಕಮಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ

ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ನಾಳೆ ಉಡುಪಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಮತ್ತಷ್ಟು ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. ಭಾರತಕ್ಕಿದು ಸಂಕಷ್ಟದ ಕಾಲ, ಎಲ್ಲರೂ ಒಗ್ಗಟಾಗಿ ಎದುರಿಸಬೇಕು ಎಂದು ಸಚಿವರು ಹೇಳಿದರು.

ನಮ್ಮ ಬೆಳಗಾವಿಯ ಸೊಸೆ ಸೋಫಿಯಾ ಖುರೇಷಿ, ಪಾಕಿಸ್ತಾನ ಮೇಲಿನ ಅಪರೇಷನ್ ಸಿಂಧೂರ್ ಕುರಿತು ಪ್ರತಿದಿನ ದೈನಂದಿನ ಚಟುವಟಿಕೆಗಳನ್ನು ಮಾಧ್ಯಮಗಳಿಗೆ ವಿವರಿಸುತ್ತಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಚಾರ. ಅವರು ಕರ್ನಾಟಕದ ಹೆಮ್ಮೆಯ ಸೊಸೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News