×
Ad

ಎಸ್‌ಡಿಎಂ ಆಯುರ್ವೇದ ಕಾಲೇಜಿನ ವಿವಿಧ ಸೌಲಭ್ಯಗಳ ಉದ್ಘಾಟನೆ

Update: 2025-05-10 21:21 IST

ಉಡುಪಿ: ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವ ಭಾರತದ ಆಯುರ್ವೇದ ಚಿಕಿತ್ಸೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಆಯುರ್ವೇದ ಚಿಕಿತ್ಸೆಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗ ನಿರ್ಣಾಯಕ ಘಟಕದ ವಿನೂತನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಒಳಗೊಂಡ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಆಯುರ್ವೇದ ದಲ್ಲಿ ಎಸ್‌ಡಿಎಂ ಕಾಲೇಜು ಇಡೀ ದೇಶದಲ್ಲೇ ಉತ್ತಮ ಸಂಶೋಧನೆ ಮಾಡುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಲೋಪತಿಗಿಂತ ಆಯುರ್ವೇದದ ಮೇಲೆ ಹೆಚ್ಚು ವಿಶ್ವಾಸ ಬಂದಿದೆ. ಆಯುರ್ವೇದ ಚಿಕಿತ್ಸೆ ಮನಸ್ಸಿಗೆ ಹಿತ ನೀಡುತ್ತದೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಖಾಸಗಿ ವಲಯದ ಆಯುರ್ವೇದ ಕಾಲೇಜು ಗಳಲ್ಲಿ ಎಸ್‌ಡಿಎಂ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಕಾಲೇಜು ಇನ್ನೂ ಉನ್ನತ ಸ್ಥಾನ ಕ್ಕೇರಿ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.

ಆಸ್ಪತ್ರೆಯ ಮಂಜುಶ್ರೀ ಹಾಗೂ ರತ್ನಶ್ರೀ ಆರೋಗ್ಯಾಲಯಗಳ ಸೌಲಭ್ಯ ಗಳನ್ನು, ಪ್ರಯೋಗಾಲಯ ಹಾಗೂ ಔಷಧಾಲಯಗಳನ್ನು ವೀಕ್ಷಿಸಿದ ಅವರು ಸಂಸ್ಥೆ ಜನಸಾಮಾನ್ಯರಿಗೆ ಸಲ್ಲಿಸುತ್ತಿರುವ ಅವಿರತ ವೈದ್ಯಕೀಯ ಸೇವೆಯನ್ನು ಶ್ಲಾಘಿಸಿದರು.

ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕರಾದ ಡಾ. ಪ್ರಸನ್ನ ಎನ್. ರಾವ್, ಕಾಲೇಜಿನ ಪ್ರಾಂಶು ಪಾಲೆ ಡಾ. ಮಮತಾ ಕೆ., ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಹಾಗೂ ಎಸ್‌ಡಿಎಂ ಆಯುರ್ವೇದ ಫಾರ್ಮಸಿ ಮುಖ್ಯಸ್ಥ ಡಾ.ಮುರಳೀಧರ ಆರ್.ಬಲ್ಲಾಳ್ ಭಾಗವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ, ಪ್ರಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ. ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ವಂದಿಸಿದರು. ರೋಗನಿಧಾನ ವಿಭಾಗದ ಸಹಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.









Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News