×
Ad

ಭದ್ರತಾ ವ್ಯವಸ್ಥೆಗಳ ನಿರಂತರ ಪರಿಶೀಲನೆ: ಬೃಹತ್ ಕೈಗಾರಿಕೆಗಳಿಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2025-05-10 21:39 IST

ಮಂಗಳೂರು: ದ.ಕ.ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ತಮ್ಮ ಭದ್ರತಾ ವ್ಯವಸ್ಥೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪ್ರಸಕ್ತ ಪರಿಸ್ಥಿತಿ ಕುರಿತು ಜಿಲ್ಲಾ ಬಿಕ್ಕಟ್ಟು ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಮುಖ ತೈಲ, ಅನಿಲ ಘಟಕಗಳು, ಬಂದರು, ವಿಮಾನ ನಿಲ್ದಾಣಗಳಲ್ಲಿ ವಿಪತ್ತು ನಿರ್ವಹಣೆಗೆ ಅಣಕು ಪ್ರದರ್ಶನ ಕೂಡಲೇ ನಡೆಸಬೇಕು. ಜಿಲ್ಲಾಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ. ಭದ್ರತಾ ವ್ಯವಸ್ಥೆ ಗಳ ಬಗ್ಗೆ ನಗರ ಪೊಲೀಸ್ ಆಯುಕ್ತರು ಆಗಿಂದಾಗ್ಗೆ ಪರಿಶೀಲಿಸಲಿದ್ದಾರೆ ಎಂದು ಮುಲ್ಲೈ ಮುಗಿಲನ್ ತಿಳಿಸಿದರು.

ಈ ಸಂದರ್ಭ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸಕ್ತ ಪರಿಸ್ಥಿತಿ ಕುರಿತು ಎಲ್ಲ ಜಿಲ್ಲಾಡಳಿತ ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಭದ್ರತಾ ಸಿದ್ಧತೆಗಳ ಪರಿಶೀಲಿಸಿದರು. ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಜಿಲ್ಲೆಯ ಎಲ್ಲ ಪ್ರಮುಖ ಸಂಸ್ಥೆ, ಮೂಲಸೌಲಭ್ಯ ತಾಣಗಳು, ಧಾರ್ಮಿಕ ಕೇಂದ್ರಗಳು, ಜನಸಂದಣಿ ಪ್ರದೇಶಗಳ ಭದ್ರತಾ ವ್ಯವಸ್ಥೆ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಎಂದರು.

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾತನಾಡಿ ಈಗಾಗಲೇ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರವೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ರಾತ್ರಿ ನಾಕಾಬಂದಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು 24 ಗಂಟೆಗಳ ಕಾಲವೂ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸುಳ್ಳು ಮಾಹಿತಿ ಹರಡಿದ ಹಲವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಡ್ರೋಣ್‌ಗಳ ಬಳಕೆ, ಹಾರಾಟಕ್ಕೆ ನಿರ್ಬಂಧಿಸ ಲಾಗಿದೆ ಎಂದರು.

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಜಿಲ್ಲಾ ವ್ಯಾಪ್ತಿಯ ಭದ್ರತಾ ವ್ಯವಸ್ಥೆ ಯ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ಆನಂದ್, ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಎನ್‌ಎಂಪಿಎ, ವಿಮಾನ ನಿಲ್ದಾಣ, ಎಂಆರ್‌ಪಿಎಲ್ ಸಿಐಎಸ್‌ಎಫ್, ತೈಲ, ಅನಿಲ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News