ಟೆಂಪೋ ಟ್ರಾವೆಲ್ಲರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
Update: 2025-05-12 20:50 IST
ಕೋಟ: ಟೆಂಪೋ ಟ್ರಾವೆಲ್ಲರ್ ವಾಹನವು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಮೇ 11ರಂದು ಮಧ್ಯಾಹ್ನ ವೇಳೆ ಗುಂಡ್ಮಿ ಗ್ರಾಮದ ಪೆಟ್ರೋಲ್ ಪಂಪ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಮೃತರನ್ನು ರವೀಂದ್ರ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಟೆಂಪೋ ಎದುರಿನಲ್ಲಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರವಿಂದ್ರ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.