ನಾಡ ಗ್ರಾಪಂ ವಿರುದ್ಧ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಅಂತ್ಯ
ಕುಂದಾಪುರ, ಮೇ 15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಸ್ಥರು ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಾಡಾ ಗ್ರಾಪಂ ಎದುರು ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಗಳು ವಿಶೇಷ ಸಭೆಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಕೈಬಿಡಲಾಯಿತು.
ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಗಳಲ್ಲಿ ಬೇಸಗೆಯಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೌಪರ್ಣಿಕ ನದಿಗೆ ಕೋಣ್ಕಿ- ಹೇರೂರು ಭಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ನಾಡ ವಲಯ, ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಧರಣಿ ಆರಂಭಿಸಿದ್ದರು.
ಗುರುವಾರ ಬೈಂದೂರು ತಹಶೀಲ್ದಾರ್ ಭೀಮಸೇನ್ ಕುಲಕರ್ಣಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಧರಣಿ ನಿರತ ಸ್ಥಳಕ್ಕೆ ಆಗಮಿಸಿ, ಅವಿಭಜಿತ ನಾಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇ 27 ಅಥವಾ ಮೇ 28ರಂದು ವಿಶೇಷ ಸಭೆ ನಿಗದಿಪಡಿಸಲಾಗಿದ್ದು, ಸಭೆಯಲ್ಲಿ ಈ ಕುರಿತು ಚರ್ಚಿಸಿ ಪರಿಹಾರ ಕಂಡು ಕೊಳ್ಳುವುದಾಗಿ ಲಿಖಿತವಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡಲಾಯಿತು. ಗ್ರಾ.ಪಂ. ಪಿಡಿಒ ಹರೀಶ್ ಹಾಜರಿದ್ದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಖಂಡ ರಾಜೀವ ಪಡುಕೋಣೆ, ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನ ನಾಡ, ನಾಡ ವಲಯದ ಅಧ್ಯಕ್ಷೆ ಮನೋರಮಾ ಭಂಡಾರಿ, ರಾಜ್ಯ ಮುಖಂಡರಾದ ಶೀಲಾವತಿ, ಗ್ರಾಪಂ ಸದಸ್ಯೆ ಶೋಭಾ ಕೆರೆಮನೆ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿಗಳಾದ ರಾಜೇಶ್ ಪಡುಕೋಣೆ, ನಿಸರ್ಗ ಪಡುಕೋಣೆ, ನಾಗರಾಜ್ ಕುರು, ಪಲ್ಲವಿ, ಸುನೀತಾ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.