×
Ad

ಕುಂದಾಪುರ: ಕೇಂದ್ರದ ಕಾರ್ಮಿಕ ಸಂಹಿತೆ ಪ್ರತಿಗಳನ್ನು ದಹಿಸಿ ಪ್ರತಿಭಟನೆ

Update: 2025-05-20 17:58 IST

ಕುಂದಾಪುರ, ಮೇ 20: ಸಿಐಟಿಯು ಕುಂದಾಪುರ ತಾಲೂಕು ವತಿಯಿಂದ ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆ ಹಾಗೂ ನೂತನ ಕಾರ್ಮಿಕ ಸಂಹಿತೆ ವಿರೋಧಿಸಿ ಮಗಳವಾರ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಸಂಹಿತೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ದೇಶದ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ದೇಶದ ಪರಿಸ್ಥಿತಿ ಗಮನಿಸಿ ಜುಲೈ 9ಕ್ಕೆ ಮುಂದೂಡಲಾಗಿದೆ. ದೇಶದ ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ ಕಾರ್ಮಿಕರ ಕಾನೂನು ಬಂಡವಾಳಗಾರರ ಪಾದದಡಿಯಲ್ಲಿಟ್ಟು ನವಗುಲಾಮಗಿರಿಗೆ ತಳ್ಳುವ ಸಂಹಿತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಾಲ್ಕು ಕೇಂದ್ರದ ಸಂಹಿತೆ ಪ್ರತಿಗಳನ್ನು ಕಾರ್ಮಿಕ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ., ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ವಿಜೇಂದ್ರ ಕೋಣಿ, ಸುಧೀರ್ ಕುಮಾರ್, ಶಶಿಕಾಂತ್ ಎಸ್., ರಾಘವೇಂದ್ರ ಡಿ. ಮೊದಲಾದವರು ಉಪಸ್ಥಿತರಿದ್ದರು.

ಹೆಂಚು ಕಾರ್ಮಿಕರಿಂದ ಪ್ರತಿಭಟನೆ: ಕುಂದಾಪುರ ಹೆಂಚು ಕಾರ್ಮಿಕರು ಹೆಂಚು ಕಾರ್ಖಾನೆಗಳ ಗೇಟ್ ಬಳಿ ಸಂಹಿತೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರದ ನೂತನ ಸಂಹಿತೆಗಳು ವೇತನ ಪಾವತಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬೋನಸ್ ಪಾವತಿ ಕಾಯಿದೆ, ಸಮಾನ ಸಂಭಾವನೆ ಕಾಯ್ದೆಯನ್ನು 2019ರ ನೂತನ ಸಂಹಿತೆ ರದ್ದುಗೊಳಿಸುತ್ತದೆ ಹಾಗೂ ಟ್ರೇಡ್ ಯೂನಿಯನ್ಸ್ ಕಾಯಿದೆ, ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ಕಾಯಿದೆ ಮತ್ತು ಕೈಗಾರಿಕಾ ವಿವಾದಗಳ ಕಾಯಿದೆಗಳನ್ನು 2020ರಲ್ಲಿ ತಂದ ನೂತನ ಸಂಹಿತೆ ರದ್ದುಗೊಳಿಸುತ್ತದೆ ಇದು ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಇಲ್ಲದಂತೆ ಮಾಡುತ್ತದೆ ಎಂದು ಹಂಚು ಕಾರ್ಮಿಕರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News