ಕುಂದಾಪುರ- ಬೈಂದೂರು ತಾಲೂಕುಗಳಲ್ಲಿ ಭಾರೀ ಮಳೆ
ಕುಂದಾಪುರ, ಮೇ 20: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಮಂಗಳವಾರ ಮುಂಜಾನೆ ಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಗೆ ಉಭಯ ತಾಲೂಕುಗಳಲ್ಲಿ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯಲ್ಲಿ ಹೊಳೆಯಂತೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಕುಂದಾಪುರದ ಬಸ್ರೂರು ಮೂರುಕೈ ಬಳಿ ಸರ್ವಿಸ್ ರಸ್ತೆಯಲ್ಲಿ ಮಳೆ ಬಂದರೆ ವಾಹನ ಸಂಚಾರ ಸುಗಮ ವಾಗಿರಲು ಅಸಾಧ್ಯ ಎಂಬುದು ಈ ವರ್ಷದ ಮೊದಲ ಮಳೆ ಕೂಡ ಸಾಬೀತು ಪಡಿಸಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಸ್ವತಃ ಡಿಸಿ, ಎಸ್ಪಿ ಬಂದು ನೋಡಿ ಹೆದ್ದಾರಿ ಪ್ರಾಧಿಕಾರದ ವರಿಗೆ, ಸಂಬಂಧಿತರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದರೂ ಕೂಡ ಯಾವುದೇ ಪ್ರಗತಿ ಕಂಡಿಲ್ಲ.
ಮಳೆ ನೀರು ಹರಿಯಲು ಸರ್ವಿಸ್ ರಸ್ತೆ ಬದಿಯಲ್ಲಿ ಸರಿಯಾದ ಚರಂಡಿ ಇಲ್ಲ. ಚರಂಡಿ ಇರುವಲ್ಲಿ ರಸ್ತೆ ಯಿಂದ ನೀರು ಚರಂಡಿಗೆ ಹೋಗುವುದಿಲ್ಲ. ಚರಂಡಿಗೆ ಹರಿದು ಹೋದ ನೀರು ಚರಂಡಿಯಲ್ಲಿ ಹೂಳು ತುಂಬಿ ಮುಂದೆ ಸಾಗುವುದಿಲ್ಲ. ಬಸ್ರೂರು ಮೂರುಕೈ, ಕುಂದಾಪುರದ ಫ್ಲೈಓವರ್ ಸಮೀಪ ಟಿಟಿ ರೋಡ್ ಬಳಿ ಸಮಸ್ಯೆಗಳಿವೆ.
ಇನ್ನು ಹೆದ್ದಾರಿ ಹಾಗೂ ಫ್ಲೈ ಓವರ್ ಮೇಲೆ ಘನ-ಲಘು ವಾಹನಗಳು ಮಳೆ ಬಂದಾಗ ಚಲಿಸಿದರೆ ಸರ್ವಿಸ್ ರಸ್ತೆಯಲ್ಲಿ ಹೋಗುವ ಎಲ್ಲ ವಾಹನಗಳ ಮೇಲೂ ನೀರು ರಾಚುವ ದೃಶ್ಯಕಂಡು ಬಂದಿತ್ತು. ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ವಿವಿದೆಡೆ ಇದೆ ಸಮಸ್ಯೆ ಕಂಡುಬಂದಿದೆ.
ಕೊಲ್ಲೂರಿನಲ್ಲಿ ಮಳೆ ಅವಾಂತರ!
ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೊಲ್ಲೂರು ದೇವಸ್ಥಾನ ಎದುರು ಹಾದು ಹೋಗುತ್ತಿದ್ದು ಇಲ್ಲಿ ನಡೆಯುತ್ತಿರುವ ಅವೈಜ್ಞಾನಿಕ, ನಿಧಾನಗತಿ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಭಕ್ತಾಧಿಗಳು ಪರಿತಪಿಸುವಂತಾಗಿದೆ.
ದೇವಸ್ಥಾನದ ಎದುರೆ ನೂರಾರು ಮೀಟರ್ ಕಾಮಗಾರಿ ಅಪೂರ್ಣ ಗೊಳಿಸಿದ್ದು ಮಂಗಳವಾರ ಮಳೆ ಯಿಂದಾಗಿ ಸುಗಮ ಸಂಚಾರಕ್ಕೆ ಬಾರೀ ಅಡಚಣೆ ಉಂಟಾಗಿತ್ತು. ಅಲ್ಲದೆ ದೇವಸ್ಥಾನಕ್ಕೆ ಸಾಗುವ ಅನತಿ ದೂರದಲ್ಲಿರುವ ಸೇತುವೆ ಸಮೀಪ ಹೆದ್ದಾರಿಯಲ್ಲೆ ಹೊಳೆಯಂತೆ ನೀರು ನಿಂತು ಸಮಸ್ಯೆಯಾಗಿತ್ತು. ಕೊಲ್ಲೂರು ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಟ್ಟರು.