×
Ad

ಎರಡು ತಿಂಗಳು ಮೀನುಗಾರಿಕೆ ನಿಷೇಧ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ ಬೋಟುಗಳು

Update: 2025-06-01 20:34 IST

ಮಲ್ಪೆ, ಜೂ.1: ಮಳೆಗಾಲದಲ್ಲಿ ಜೂ.1ರಿಂದ ಜು.31ರವರೆಗೆ ಒಟ್ಟು ಎರಡು ತಿಂಗಳ ಕಾಲ ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಇದೀಗ ನೂರಾರು ಬೋಟುಗಳು ಲಂಗರು ಹಾಕಿವೆ.

ಈ ಸಮಯ ಮೀನುಗಳ ಸಂತಾನ ಅಭಿವೃದ್ಧಿ ಪ್ರಸಕ್ತವಾಗಿರುವುದರಿಂದ ಸರಕಾರ ಪ್ರತಿ ಮಳೆಗಾಲದ ಆರಂಭದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಮೀನುಗಾರಿಕೆ ತೆರಳಿದ್ದ ಬೋಟುಗಳು ಬಂದರಿಗೆ ಆಗಮಿಸಿ ಲಂಗರು ಹಾಕುತ್ತಿ ದ್ದವು. ಇದೀಗ ಜೂ.1ಕ್ಕೆ ಎಲ್ಲ ಬೋಟುಗಳು ಬಂದರು ಸೇರಿಕೊಂಡಿವೆ.

ಬಂದರಿನಲ್ಲಿ ಹೊರ ಜಿಲ್ಲೆಯ ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ ಮುಂತಾದ ಕಡೆಗಳಿಂದ ಪುರುಷ, ಮಹಿಳಾ ಕಾರ್ಮಿಕರು ಮೀನು ಹೊರುವ, ಲೋಡ್, ಅನ್‌ಲೋಡ್ ಮಾಡುವ ಕಾಯಕ ಮಾಡಿಕೊಂಡಿದ್ದು, ಇದೀಗ ರಜೆಯ ಹಿನ್ನೆಲೆಯಲ್ಲಿ ಅವರಲ್ಲಿ ಬಹುತೇಕ ಮಂದಿ ಊರಿಗೆ ತೆರಳಿದ್ದಾರೆ. ಅದೇರೀತಿ ಹೊರ ರಾಜ್ಯಗಳಾದ ಒರಿಸ್ಸಾ, ಆಂಧ್ರಪ್ರದೇಶ, ಜಾರ್ಖಾಂಡ್ ರಾಜ್ಯಗಳ ಕಾರ್ಮಿಕರು ಕೂಡ ಇಲ್ಲಿ ದುಡಿಯುತ್ತಿದ್ದು, ಇವರು ಕೂಡ ತಮ್ಮ ತಮ್ಮ ಮನೆಗೆ ತೆರಳುತ್ತಿರುವುದು ಕಂಡು ಬಂದಿದೆ.

ಈ ಮಧ್ಯೆ ಬೋಟು ಮಾಲಕರು, ಮೀನುಗಾರರು ತಮ್ಮ ಬೋಟ್‌ಗಳನ್ನು ಕಟ್ಟುವ, ಮೇಲೆಳೆಯುವ ಹಾಗೂ ರಿಪೇರಿ, ನಿರ್ವಹಣೆ, ಬಲೆ ಹೊಂದಿಸಿ ಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಾಕಷ್ಟು ದೊಡ್ಡಮಟ್ಟದಲ್ಲಿ ಮತ್ಸ್ಯಕ್ಷಾಮ ಎದುರಾಗಿದೆ. ಇದರಿಂದ ಬೋಟ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ದೊರೆತಿಲ್ಲ. ನಷ್ಟದ ಹೊರೆ ತಪ್ಪಿಸು ವುದಕ್ಕೆ ಮೀನುಗಾರಿಕೆಯ ಋತುವಿನಲ್ಲೇ ಶೇ.60ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News