×
Ad

ಗುಣಮುಖರಾದರೂ ಮನೋರೋಗಿಗಳಿಗೆ ಸ್ಪಂದಿಸದ ಕುಟುಂಬ!

Update: 2025-06-01 20:43 IST

ಉಡುಪಿ, ಜೂ.1: ಪ್ರತ್ಯೇಕ ಪ್ರಕರಣಗಳಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ರಕ್ಷಿಸಲ್ಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇಬ್ಬರು ಮನೋರೋಗಿಗಳ ವಾರೀಸು ದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಅವರನ್ನು ಕೊಳಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಗಿದೆ.

ತಿಂಗಳ ಹಿಂದೆ ನಿಟ್ಟೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಸ್ತ್ರನಾಗಿ ತಿರುಗಾಡುತ್ತಾ ಸಾರ್ವಜನಿಕರಿಗೆ ಮುಜುಗರ ಸೃಷ್ಟಿಸಿದ್ದ ದಿನೇಶ್ ಪೂಜಾರಿ ಹಾಗೂ 15 ದಿನಗಳ ಹಿಂದೆ ಕುತ್ಪಾಡಿಯಲ್ಲಿ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದ ಹನುಮಂತ ಅವರನ್ನು ರಕ್ಷಿಸಿದ್ದ ವಿಶು ಶೆಟ್ಟಿ ನಂತರ ಚಿಕಿತ್ಷೆಗಾಗಿ ದೊಡ್ಡಣ ಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು.

ಇದೀಗ ಇವರಿಬ್ಬರು ಗುಣಮುಖರಾಗಿ, ತಮ್ಮ ಕುಟುಂಬವನ್ನು ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಇವರ ಕುಟುಂಬ ಪತ್ತೆಯಾಗದಿರು ವುದು ಅಥವಾ ಪತ್ತೆಯಾದರೂ ಕುಟುಂಬಿಕರ ಸ್ಪಂದನೆ ಸಿಗದ ಕಾರಣ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರೂ ಅತಂತ್ರರಾಗಿದ್ದಾರೆ. ಕೊನೆಗೆ ವಿಶು ಶೆಟ್ಟಿ ಕೊಳಲಗಿರಿಯ ಸ್ವರ್ಗ ಆಶ್ರಮದ ಮುಖ್ಯಸ್ಥರನ್ನು ಸಂಪರ್ಕಿಸಿ, ಅಶ್ರಯ ನೀಡುವಂತೆ ಮನವಿ ಮಾಡಿದ ಮೇರೆಗೆ ದಾಖಲಿ ಸಿಕೊಳ್ಳಲಾಗಿದೆ. ಇವರಿಬ್ಬರ ಚಿಕಿತ್ಸೆಗೆ ಆಸ್ಪತ್ರೆ ವೆಚ್ಚವನ್ನು ವಿಶು ಶೆಟ್ಟಿ ವ್ಯವಸ್ಥೆಗೊಳಿಸಿದ್ದು, ಸಂಬಂಧಿಕರು ಬಂದು ಇವರನ್ನು ತಮ್ಮ ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಾರೆ.

‘ತಮ್ಮೂರಲ್ಲಿ ಮನೋ ರೋಗಿಗಳಿಂದ ತೊಂದರೆಯಾದಾಗ ಕರೆ ಮಾಡಿ ತಿಳಿಸುವ ಸಾರ್ವಜನಿಕರು, ಆಸ್ಪತ್ರೆಗೆ ಸೇರಿಸಿದ ನಂತರ ಯಾವುದೇ ಸ್ಪಂದನೆ ನೀಡುವುದಿಲ್ಲ. ಹೀಗಾಗಿ ರೋಗಿಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವ ಜವಾಬ್ದಾರಿ ಆಸ್ಪತ್ರೆಗೆ ದಾಖಲಿಸಿದವರ ಮೇಲೆಯೇ ಬೀಳುತ್ತದೆ. ಇದೊಂದು ಮಾನವೀಯ ಕೆಲಸ ಎನ್ನುವುದಾದರೂ, ಸಾವಿರಾರು ರೂ. ಮೊತ್ತವನ್ನು ನಿರಂತರವಾಗಿ ಒಬ್ಬರಿಂದಲೇ ಭರಿಸಲು ಸಾಧ್ಯವಾದೀತೆ? ಈ ಬಗ್ಗೆ ಸಾರ್ವಜನಿಕರು ಹಾಗೂ ಸ್ಪಂದನೀಯ ಸಂಘ ಸಂಸ್ಥೆಗಳು ಚಿಂತನೆ ನಡೆಸಬೇಕು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News