×
Ad

ಕೃಷಿ ವಿಜ್ಞಾನಿಗಳ ತಂಡದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಕರಿಗೆ ತರಬೇತಿ: ಡಾ.ನವೀನ್

Update: 2025-06-05 20:27 IST

ಶಿರ್ವ, ಜೂ.5: ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳ ತಂಡ ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಗುರುತಿಸಿ ಪ್ರಾತಿಕ್ಷಿಕೆ ಮತ್ತು ತರಬೇತಿ ನೀಡುವ ಕಾರ್ಯ ನಿರಂತರವಾಗಿ ನಡೆಸುತ್ತಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನವೀನ್ ಹೇಳಿದ್ದಾರೆ.

ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿ ಅಟಾರಿ-11, ವಿಸ್ತರಣಾ ನಿರ್ದೇಶನಾಲಯ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಉಡುಪಿ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಶಿರ್ವ ಗ್ರಾಪಂ ಸಭಾಭವನದಲ್ಲಿ ಬುಧವಾರ ನಡೆದ ಪೂರ್ವ ಮುಂಗಾರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ರೈತರಿಗೆ ಪೂರಕವಾಗಿ ಹೊಸ ತಂತ್ರಜ್ಞಾನ ಪರಿಚಯ ಮಾಡುವ ಉದ್ದೇಶದಿಂದ ಕೃಷಿ ಮತ್ತು ಅದರ ಅವಲಂಬಿತ ಉದ್ಯೋಗದ ಒಳಾಂಗಣ ಹಾಗೂ ಹೊರಾಂಗಣ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಶ್ರೀನಿವಾಸ್, ಬೀಜೋತ್ಪಾದನೆ, ಗಿಡಮೂಲಿಕೆ, ತರಕಾರಿ, ಹೂ ಮತ್ತು ಔಷಧೀಯ ಸಸ್ಯ, ಸುಗಂಧ ದ್ರವ್ಯ ಬೆಳೆ ತಳಿಗಳ ಬಗ್ಗೆ ತಿಳಿಸಿದರು. ಕಾಪು ತಾಲೂಕು ಪಂಚಾಯತ್ ಕೃಷಿ ಅಧಿಕಾರಿ ಪುಷ್ಪಾ, ಕೃಷಿ ಪರಿಕರಗಳು, ಸಹಾಯಧನದೊಂದಿಗೆ ಯಂತ್ರೋಪಕರಣಗಳು, ಕೃಷಿಭಾಗ್ಯ ಯೋಜನೆ, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಾವರ ಕೃಷಿ ವಿಜ್ಞಾನಕೇಂದ್ರದ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ.ಎನ್, ಹವಾಮಾನ ಮುನ್ಸೂಚನೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು, ಪುಸ್ತಕ ಬರಹಗಾರ್ತಿ ಶ್ವೇತಾ, ಆರೋಗ್ಯ ಸಖಿಯವರು, ಸಂಜೀವಿನಿ ಒಕ್ಕೂಟಗಳ ಸದಸ್ಯರು, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಮಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News