×
Ad

ಸೀತಾನದಿ ಬೆಳಾರ್ ಪ್ರದೇಶದಲ್ಲಿ ಆನೆ ಓಡಾಟ: ಸ್ಥಳೀಯರಲ್ಲಿ ಆತಂಕ

Update: 2025-06-10 21:18 IST

ಹೆಬ್ರಿ: ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯದ ಸೀತಾನದಿ ಬೆಳಾರ್ ಪರಿಸರದಲ್ಲಿ ಮತ್ತೆ ಆನೆ ಓಡಾಟ ಕಂಡುಬಂದಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ.

ಸೀತಾನದಿಯಿಂದ ನೆಲ್ಲಿಕಟ್ಟೆ ಹೋಗುವ ರಸ್ತೆಯ ಬೆಳಾರ್ ಪರಿಸರದಲ್ಲಿ ರಸ್ತೆಯಲ್ಲಿ ಹಾದು ಹೋದ ಆನೆ ಪಕ್ಕದಲ್ಲಿರುವ ರಫೀಕ್ ಎಂಬವರ ಮನೆಯ ಗೇಟ್‌ನ್ನು ಮುರಿದು ಒಳಗೆ ನುಗ್ಗಿದೆ ಎನ್ನಲಾಗಿದೆ. ಅಲ್ಲೇ ಸಮೀಪದ ಗಿಡಮರ ಗಳಿಗೂ ಹಾನಿ ಮಾಡಿದೆ. ಅಲ್ಲಿಂದ ಮುಂದೆ ಸೋಮೇಶ್ವರ ಅಭಯಾರಣ್ಯದ ಒಳಗೆ ಹೋಗಿದೆ ಎಂದು ತಿಳಿದುಬಂದಿದೆ.

ರವಿವಾರ ರಾತ್ರಿ ಕಬ್ಬಿನಾಲೆ ಪರಿಸರದಲ್ಲಿಯೂ ಆನೆ ಕಾಣಿಸಿಕೊಂಡಿದ್ದು ಆ ಭಾಗದ ಜನ ಭೀತಿಗೆ ಒಳಗಾಗಿದ್ದಾರೆ. ಅಲ್ಲಿಂದ ಸೀತಾನದಿ ನಡ್ಪಾಲು ಪರಿಸರಕ್ಕೆ ಹೋಗಿರುವ ಆನೆ ಶಿರ್ಲಾಲ್‌ನಲ್ಲಿಯೂ ಕಾಣಸಿಕ್ಕಿದೆ. ನೆಲ್ಲಿಕಟ್ಟೆ ಗ್ರಾಮದ ದೇವಸ್ಥಾನಬೆಟ್ಟು ಶೇಡಿಕಂತ್ ಪರಿಸರದಲ್ಲಿ ಹಾಗೂ ಬಡ ತಿಂಗಳೆ ಪರಿಸರದಲ್ಲಿ ಆನೆ ಸಂಚಾರ ಮಾಡಿ ಹಲವಾರು ಗಿಡಮರಗಳನ್ನು ಹಾನಿ ಮಾಡಿದೆ ಎಂದು ತಿಳಿದುಬಂದಿದೆ.

ಆನೆ ಸಂಚಾರದ ಪ್ರದೇಶಗಳಿಗೆ ಜೂ.9ರಂದು ಹೆಬ್ರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲೂ ಆನೆ ಕಾಣಿಸಿಕೊಂಡಿಲ್ಲ. ಅದೇ ರೀತಿ ಅಧಿಕಾರಿಗಳು ಸುತ್ತಮುತ್ತಲ ಮನೆಗಳಿಗೆ ಭೇಟಿ ನೀಡಿ ರಾತ್ರಿ ಹೊತ್ತು ಒಬ್ಬರೇ ನಡೆದುಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಪರಿಸರದಲ್ಲಿ ಆನೆ ಓಡಾಡುತ್ತಿದೆ. ಹಗಲು ಹೊತ್ತು ಆನೆಯ ಸಂಚರಿಸುವುದಿಲ್ಲ ಆದರೆ ರಾತ್ರಿ ಹೊತ್ತು ಸಂಚರಿಸುವುದರಿಂದ ಯಾರು ಕೂಡ ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ತಿರು ಗಾಡಬೇಡಿ. ಈ ಬಗ್ಗೆ ನಮ್ಮ ಇಲಾಖೆ ಆನೆಯ ಚಲನವಲನನ್ನು ಗಮನಿಸುತ್ತಿದೆ. ಸಮಸ್ಯೆ ಉಲ್ಬಣ ಗೊಂಡಲ್ಲಿ ಕ್ರಮ ಕೈಗೊಳ್ಳುವುದಾಗಿ ಸೋಮೇಶ್ವರ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಚಿದಾನಂದಪ್ಪಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News