ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ರತ್ನ ಖಚಿತ ಚಿನ್ನದ ಮುಖವಾಡ ಅರ್ಪಣೆ
ಕುಂದಾಪುರ, ಜೂ.11: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕುವೆಂಪು ನಗರದ ರಾಘವಾಂಬಿಕ ಆಯುರ್ವೇದ ಚಿಕಿತ್ಸಾಲಯದ ಡಾ.ಲಕ್ಷ್ಮೀ ನಾರಾಯಣ ಆರ್ ಕೊಲ್ಲೂರು ದೇವಳದಲ್ಲಿ ಶ್ರೀಮೂಕಾಂಬಿಕಾ ದೇವಿಗೆ 1051.930 ಕೆ.ಜಿ. ತೂಕದ ರತ್ನ ಖಚಿತ ಚಿನ್ನದ ಮುಖವಾಡವನ್ನು ಬುಧವಾರ ಅರ್ಪಿಸಿದ್ದಾರೆ.
ಶ್ರೀದೇವಿಗೆ ರತ್ನಖಚಿತ ಚಿನ್ನದ ಮುಖವಾಡ ಅರ್ಪಿಸಲು ಸಂಕಲ್ಪಮಾಡಿದ್ದ ಅವರು, ದೇಗುಲದ ವ್ಯವಸ್ಥಾಪನಾ ಸಮಿತಿಯಿಂದ ಅನುಮತಿ ಪಡೆದುಕೊಂಡು ಅತ್ಯಾಕರ್ಷಕ ಮುಖವಾಡ ಸಿದ್ಧಪಡಿಸಿದ್ದಾರೆ. ಮುಖವಾಡಕ್ಕೆ 693.750 ತೂಕದ 22 ಕ್ಯಾರೆಟ್ ಚಿನ್ನ ಬಳಸಲಾಗಿದ್ದು, ವಜ್ರ, ಪಚ್ಚೆ, ನೀಲ, ಮಾಣಿಕ್ಯ ಹಾಗೂ ದಕ್ಷಿಣ ಭಾರತದ ಸಮುದ್ರ ಹವಳಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಇದನ್ನು ಪರೀಕ್ಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.
ಬುಧವಾರ ಕುಟುಂಬ ಸಹಿತರಾಗಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಡಾ.ಲಕ್ಷ್ಮೀನಾರಾಯಣ ಆರ್ ಮುಖವಾಡದ ಸಮರ್ಪಣೆ ಮಾಡಿದ್ದಾರೆ. ದೇಗುಲದ ವತಿಯಿಂದ ಡಾ.ಲಕ್ಷ್ಮೀನಾರಾಯಣ ಆರ್ ದಂಪತಿಯನ್ನ್ನು ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ತಗ್ಗರ್ಸೆ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಕೆ.ಸುಧಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.