×
Ad

ಉಡುಪಿ ಜಿಲ್ಲೆಯಲ್ಲಿ ಬಾಲಕಾರ್ಮಿಕ, ಬಾಲ್ಯವಿವಾಹ ನಿರ್ಮೂಲನೆಗೆ ಕೈಜೋಡಿಸಿ: ಡಿಸಿ ವಿದ್ಯಾಕುಮಾರಿ ಕರೆ

Update: 2025-06-12 20:53 IST

ಉಡುಪಿ, ಜೂ.12: ಸಮಾಜದ ಅನಿಷ್ಟ ಪದ್ಧತಿಗಳಾಗಿರುವ ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹವನ್ನು ತಳಮಟ್ಟದಿಂದಲೇ ನಿರ್ಮೂಲನೆಗೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲಕಾರ್ಮಿಕ ಪದ್ಧತಿ ಎಂಬುದು ಸಮಾಜದ ಅನಿಷ್ಠ ಪದ್ಧತಿಯಾಗಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಉಡುಪಿಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹವು ಅನಿಷ್ಠ ಪದ್ಧತಿಯಾಗಿದ್ದು, ಇದರಿಂದ ಮಕ್ಕಳು ಬಾಲ್ಯಾವಸ್ಥೆಯನ್ನು ಸವಿಯುವುದರಿಂದ ವಂಚಿತರಾಗುವ ಜೊತೆಗೆ ಶಿಕ್ಷಣದಿಂದಲೂ ವಂಚಿತರಾ ಗುತ್ತಾರೆ. ಒತ್ತಾಯ ಪೂರ್ವಕವಾಗಿ ಮಕ್ಕಳು ದುಡಿಮೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಮಗು ಅನೇಕ ಪರಿಣಾಮವನ್ನು ಎದುರಿಸಿ, ಮುಂದೆ ಸಮಾಜಘಾತುಕ ವ್ಯಕ್ತಿಯಾಗಿ ಬದಲಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದರು.

ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸದಲ್ಲಿ ನೇಮಿಸಿಕೊಳ್ಳುವಂತಿಲ್ಲ. 14ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕ ರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಲ್ಲಿ ನಿಯಮವಿದೆ. ಇದನ್ನು ಗಮನಿಸದೆ ಕೆಲವರು ಮಕ್ಕಳನ್ನು ನಿಯೋಜಿಸಿ ಕೊಳ್ಳುತ್ತಾರೆ. ಇಂಥ ಮಕ್ಕಳನ್ನು ಕೆಲಸಕ್ಕೆ ನೇಮಿಸಿ ಕೊಳ್ಳುವ ಮಾಲಕರನ್ನು ಹಾಗೂ ಮಕ್ಕಳ ಪೋಷಕರನ್ನು ಸಹ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಗಳಿವೆ ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.

ಈ ಹಿಂದೆ ಜಿಲ್ಲೆಯಲ್ಲಿ ಪತ್ತೆಯಾದ ಬಾಲಕಾರ್ಮಿಕರನ್ನು ರಕ್ಷಿಸಿ, ಅವರಿಗೆ ಪುನರ್ವಸತಿ ಕಲ್ಪಿಸಿ, ವಿದ್ಯಾ ಭ್ಯಾಸ ಸೇರಿದಂತೆ ವಿವಿಧ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದ ಅವರು, ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸಲು ಪೂರಕ ವಾತಾವರಣ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್‌ಶಂಕರ ಮಾತನಾಡಿ, ಕೆಲವು ಮಕ್ಕಳು ತಮ್ಮ ಕುಟುಂಬದ ಅಸಹಾಯಕತೆಯಿಂದಾಗಿ ಬಾಲ ಕಾರ್ಮಿಕ ರಾಗುತ್ತಾರೆ. ಆ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನೂ ಸಹ ಎದುರಿಸುತ್ತಾರೆ. ಬಾಲ ಕಾರ್ಮಿಕರು ದುಡಿಯುತ್ತಿರುವುದು ಕಂಡುಬಂದಲ್ಲಿ, ಅಮಾಯಕ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಅರಿತು ಅವರ ರಕ್ಷಣೆಗೆ ಮುಂದಾಗಬೇಕು. ಹೊರ ಜಿಲ್ಲೆಯಿಂದ ಬಂದಿರುವ ಮಕ್ಕಳು ಎಂದು ಅವರನ್ನು ನಿರ್ಲಕ್ಷಿಸಬಾರದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವಕೀಲ ರಾಯಲ್ ಫರ್ನಾಂಡೀಸ್ ಸಂಪನ್ಮೂಲ ವ್ಯಕ್ತಿಯಾಗಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016ರ ಕುರಿತು ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್. ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ ಸ್ವಾಗತಿಸಿದರೆ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜಿಲ್ಲೆಯಲ್ಲಿ ಈವರೆಗೆ 62 ಬಾಲ್ಯವಿವಾಹ ಪ್ರಕರಣ

ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂದುವರೆದಿದ್ದರೂ ಸಹ, ಈವರೆಗೆ ಸುಮಾರು 62 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಹದಿನೆಂಟು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಿಂದ ಅವರು ಭೌತಿಕವಾಗಿ ಪ್ರಭುದ್ದರಾಗಿರುವುದಿಲ್ಲ. ಅವರ ಚಿಂತನೆಗಳು ಭಿನ್ನವಾಗಿರುತ್ತವೆ. ಆದ್ದರಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪ್ರಕರಣದ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ ಸ್ಥಳೀಯ ಪೊಲೀಸರಿಗೆ ಅಥವಾ ಕಾರ್ಮಿಕ ನಿರೀಕ್ಷರುಗಳಿಗೆ ಮಾಹಿತಿ ನೀಡುವ ಮೂಲಕ ಎರಡೂ ಸಾಮಾಜಿಕ ಪಿಡುಗು ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.





 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News