ಹಿರಿಯರ ಬದುಕು ನಮಗೆ ಆದರ್ಶ: ಎಳ್ಳಾರೆ ಸದಾಶಿವ ಪ್ರಭು
ಶಿರ್ವ, ಜೂ.15: ನಮ್ಮ ಹಿರಿಯರು ಪ್ರಕೃತಿಯ ಜೊತೆಗೆ ಬೆಳೆದವರು. ಅಂದಿನ ಹಿರಿಯರ ಕಷ್ಟದ ಶ್ರಮ ಜೀವನ, ಸತ್ಯ, ನಿಷ್ಠೆ ಪ್ರಾಮಾಣಿಕತೆ ಇಂದು ಮರೆಯಾಗುತ್ತಿದೆ. ಅವರ ಬದುಕು ನಮಗೆ ಆದರ್ಶವಾಗಿರ ಬೇಕು. ಹಿರಿಯರ ಕೃಷಿ ಸಂಸ್ಕೃತಿ, ಪ್ರಕೃತಿಯ ನಂಟು ನವಪೀಳಿಗೆಗೆ ಪರಿಚಯಿಸುವ ಕಾರ್ಯ ಅಗತ್ಯ ವಾಗಿ ಮಾಡಬೇಕು ಎಂದು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಇದರ ನಿರ್ದೇಶಕ ಎಳ್ಳಾರೆ ಸದಾಶಿವ ಪ್ರಭು ಹೇಳಿದ್ದಾರೆ.
ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಹಾಗೂ ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಡಂಬೈಲು ಅನಂತರಾಮ ವಾಗ್ಲೆಯವರ ದೊಡ್ಡಗದ್ದೆಯಲ್ಲಿ ಸಮಾಜ ಬಾಂಧವರಿಗಾಗಿ ರವಿವಾರ ಏರ್ಪಡಿಸಲಾದ 8ನೇ ವರ್ಷದ ಗಾದಂತ್ ಕ್ಹೇಳ್ ಮೇಳ್ -ಕೆಸರು ಗದ್ದೆ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಸಾರಸ್ವತ ಸೌಹಾರ್ದ ಸಹಕಾರಿ ಸಂಘ ಮಣಿಪಾಲ ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಸ್ಪರ್ಧಾ ವಿಜೇಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾ ಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಸ್ಥಳೀಯ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಗದ್ದೆಯ ಯಜಮಾನ ಅನಂತರಾಮ ವಾಗ್ಲೆ, ಆರ್‌ಎಸ್‌ಬಿ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶ್ರೀದುರ್ಗಾ ಮಹಿಳಾ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶೇಷ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್‌ರವರ ಕಂಬಳದ ಕೋಣಗಳ ಓಟವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಕಂಬಳ ಕೋಣಗಳ ಯಜಮಾನ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಕೆಸರು ಗದ್ದೆಯಲ್ಲಿ ನಿಧಿ ಶೋಧ, ಮಕ್ಕಳಿಗೆ ಕೆಸರುಗದ್ದೆ ಓಟ, ಅಡಿಕೆ ಹಾಳೆ ಓಟ, ಚೆಂಡು ಹೆಕ್ಕು ವುದು, ಹಲಸಿನ ಬೀಜ ಹೆಕ್ಕುವುದು, ಪ್ರೌಢರಿಗೆ ತಂಡಗಳಲ್ಲಿ ಕಂಬಳ ಓಟ, ರಿಲೇ, ಗೂಟಕ್ಕೆ ಸುತುತಿಹಾಕಿ ಓಟ, ಬಲೂನ್ ಓಟ, ಹಿರಿಯರಿಗೆ ದಂಪತಿ ಉಪ್ಪುಮೂಟೆ ಓಟ, ಕಂಬಳ ಓಟ, ರಿಲೇ ಓಟ, ಮಡಲು ಹೆಣೆಯುವುದು, ಬೈಹುಲ್ಲಿನಿಂದ ಹಗ್ಗ ತಯಾರಿ, ಬಲೂನ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆಗಳು ನಡೆದವು.
ಪ್ರಧಾನ ಸಂಘಟಕ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.