ಜಗತ್ತನ್ನು ಆಕರ್ಷಿಸುವ ಯಕ್ಷಗಾನ ಇಡೀ ವಿಶ್ವದ ಕಲೆ: ಪುತ್ತಿಗೆ ಶ್ರೀ
ಉಡುಪಿ, ಜೂ.15: ಯಕ್ಷಗಾನ ನಮ್ಮ ಹೆಮ್ಮೆಯ ಕಲೆ. ಅದರಲ್ಲಿ ಎಲ್ಲವೂ ಅಡಗಿದೆ. ಯಕ್ಷಗಾನ ಕೇವಲ ಕರಾವಳಿಯ ಕಲೆಯಲ್ಲ. ಇದು ಇಡೀ ವಿಶ್ವದ ಕಲೆಯಾಗಿದೆ. ಈ ಕಲೆಗೆ ಇಡೀ ವಿಶ್ವವನ್ನು ಆಕರ್ಷಸುವ ಶಕ್ತಿ ಇದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃ ತಿಕ ಪ್ರತಿಷ್ಠಾನ ಉಡುಪಿ ವತಿಯಿಂದ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲೆ ಯಾವುದೇ ಭಾಷೆಯ ಪರಿಧಿಯೊಳಗೆ ಇರುವಂತದಲ್ಲ. ಕಲೆಗೆ ಯಾವುದೇ ಭಾಷೆಯ ಪರಿಧಿ ಹಾಗೂ ಬಂಧನ ಇರಬಾರದು. ಆಗ ಅದು ಕೆಲವೇ ಭಾಷೆಗೆ ಸೀಮಿತವಾಗುತ್ತದೆ. ಕಲೆ ಸೀಮಾ ತೀತವಾಗಿ ಬೆಳೆದಾಗ ಮಾತ್ರ ಅದರ ಕಲಾತ್ವ ಸ್ಪಷ್ಟವಾಗುತ್ತದೆ. ಯಕ್ಷಗಾನ ಕಲೆಗೆ ಕೊಡುಗೆ ನೀಡಿದ ಮಹನೀಯರನ್ನು ಗುರುತಿಸುವುದು ದೊಡ್ಡ ಕಾರ್ಯವಾಗಿದೆ ಎಂದರು.
ಕಾಸರಗೋಡು ಶ್ರೀಶಂಕರಾಚಾರ್ಯ ಸಂಸ್ಥಾನದ ಶ್ರೀಮದ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಸಮಾಜದಲ್ಲಿ ಸಂಸ್ಕಾರ ಬಿತ್ತಿದ ಕಲೆ. ಇದೇ ಕಾರಣಕ್ಕೆ ಇಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕೂಡ ಸಾಕಷ್ಟು ಕಡಿಮೆ. ಯಾವುದೇ ಅಪರಾಧದಲ್ಲಿ ಯಕ್ಷಗಾನ ಕಲಾವಿ ದರು, ಆಸಕ್ತರು ಸಿಲುಕಿರುವುದು ಬಹಳ ವಿರಳ. ಯಕ್ಷಗಾನ ಆ ರೀತಿ ಸಂಸ್ಕಾರದಲ್ಲಿ ಬದುಕಲು ಕಲಿಸಿ ಕೊಟ್ಟಿದೆ ಎಂದು ತಿಳಿಸಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿ ಗಳಾಗಿ ಶ್ರೀಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಹಿರಿಯ ಯಕ್ಷಗಾನ ಚಿಂತಕ ಎಂ.ಪ್ರಭಾರಕ ಜೋಶಿ, ಅಷ್ಟಾವಧಾನಿ ಡಾ.ರಾಮಕೃಷ್ಣ ಪೆಜತ್ತಾಯ ಬಾಳ, ಪಣಂಬೂರು ಯಕ್ಷನಂದನ ಸಂಚಾಲಕ ಪಿ.ಸಂತೋಷ್ ಐತಾಳ್, ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ಡಿಜಿಎಂ ವಂಸತ್ ಹೇರಳೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗೋವಿಂದ ಭಟ್, ಪ್ರೊ.ಎಂ.ಎಲ್.ಸಾಮಗ, ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಗೋಪಿಕಾ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಶಿಕಾಂತ್ ಭಟ್ ಕಾರ್ಯ ಕ್ರಮ ನಿರೂಪಿಸಿದರು.