ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಮನೆಗಳಿಗೆ ಹಾನಿ
ಉಡುಪಿ, ಜೂ.15: ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆ ರವಿವಾರವೂ ಮುಂದುವರೆದಿದ್ದು, ಕುಂದಾಪುರ ತಾಲೂಕಿನಲ್ಲಿ ಕೆಲವು ಮನೆಗಳಿಗೆ ಹಾನಿ ಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಕಾರ್ಕಳ-74.9ಮಿ.ಮೀ., ಕುಂದಾಪುರ -44.4ಮಿ.ಮೀ., ಉಡುಪಿ- 77.9ಮಿ.ಮೀ., ಬೈಂದೂರು- 58.6ಮಿ.ಮೀ., ಬ್ರಹ್ಮಾವರ-56.2ಮಿ.ಮೀ., ಕಾಪು-88.1ಮಿ.ಮೀ., ಹೆಬ್ರಿ- 48.6 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 60.4 ಮಿ.ಮೀ. ಮಳೆಯಾಗಿದೆ.
ಇಂದು ಸಂಜೆ ಭಾರೀ ಮಳೆಯಿಂದ ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿ ಕನ್ಯಾನ ಗ್ರಾಮದ ಗಣೇಶ ಎಂಬವರ ಮನೆಯ ಮೇಲೆ ಮರ ಮುರಿದು ಬಿದ್ದು ಹಾನಿಯಾಗಿದ್ದು, ಇದರಿಂದ ಸುಮಾರು 20,000 ರೂ. ನಷ್ಟವಾಗಿದೆ. ಅದೇ ರೀತಿ ಕೋಡಿ ಜಟ್ಟಿಕೇಶ್ವರ ದೇವಸ್ಥಾನ ಹತ್ತಿರ ದೇವರಾಯ ಶೇರಿಗಾರ್ ಎಂಬವರ ಮನೆಯ ಗೋಡೆ ಬಿದ್ದು ಸುಮಾರು 80,000ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಮಳೆ ಯಿಂದ ಹಲವು ರಸ್ತೆಗಳು ಹೊಂಡಮಯವಾಗಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅದೇರೀತಿ ರಾಷ್ಟ್ರೀಯ ಹೆದ್ದಾರಿ 66 ಕೂಡ ಕಿತ್ತು ಹೋಗಿ ಹೊಂಡ ಬಿದ್ದಿವೆ. ಸಮುದ್ರ ತೀರದಲ್ಲಿ ಭಾರೀ ಅಲೆಗಳು ತೀರಕ್ಕೆ ಬಡಿಯುತ್ತಿದ್ದು, ಕೆಲವು ಕಡೆ ಕಡಲ್ಕೊರೆತದ ಭೀತಿ ಎದುರಾಗಿದೆ.