×
Ad

ನರೇಗಾ ಅನುದಾನ ವಿಳಂಬದ ಬಗ್ಗೆ ಬಿಜೆಪಿಗರು ಮಾತಾಡಲಿ: ಬಿಜೆಪಿ ನಾಯಕರಿಗೆ ಸಚಿವೆ ಹೆಬ್ಬಾಳ್ಕರ್ ಸವಾಲು

Update: 2025-06-20 20:40 IST

ಉಡುಪಿ, ಜೂ.20: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ 2,000ರೂ. ಫಲಾನುಭವಿಗಳಿಗೆ ತಲುಪಲು ಒಂದು ತಿಂಗಳು ತಡವಾದರೂ ಕಟುವಾಗಿ ಟೀಕಿಸುವ ಬಿಜೆಪಿ ನಾಯಕರು, ದುಡಿಯುವ ಕೈಗಳಿಗೆ ಸಿಗುವ ನರೇಗಾ ಅನುದಾನದ ಹಣವನ್ನು ಕಳೆದ ಐದಾರು ತಿಂಗಳಿನಿಂದ ನೀಡದ ಕೇಂದ್ರ ಸರಕಾರದ ವಿರುದ್ಧ ಮಾತಾಡಲಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.

ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾ ಸಿಕ ಕೆಡಿಪಿ ಸಭೆಯ ಬಳಿಕ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಿದ್ದರು. ನರೇಗಾ ಹೊರಗುತ್ತಿಗೆ ನೌಕರರಿಗೆ ಕಳೆದ ಐದಾರು ತಿಂಗಳಿನಿಂದ ಸಂಬಳವಾಗದ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು.

ದುಡಿಯುವ ಕೈಗಳಿಗೆ ಹಣ ಸಿಗಲಿ ಎಂಬ ಉದ್ದೇಶದಿಂದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನರೇಗಾ ಯೋಜನೆಯನ್ನು ಪ್ರಾರಂಭಿಸಿದ್ದರು. ದೇಶಾದ್ಯಂತ ಬಡವರಿಗೆ ಉದ್ಯೋಗದ ಖಾತ್ರಿ ಯನ್ನು ನೀಡುವ ಯೋಜನೆಯನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ, ಬಳಿಕ ಅದರ ಉಪಯುಕ್ತತೆಯನ್ನು ಅರಿತು ಯೋಜನೆಯನ್ನು ಮುಂದುವರಿಸಿದ್ದರು.

ಆದರೆ ಕಳೆದ ಐದಾರು ತಿಂಗಳಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸಂಬಳ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಯ ಬೆದರಿಕೆ ಹಾಕುತ್ತಿರುವ ಬಿಜೆಪಿ ನಾಯಕರು ಧೈರ್ಯವಿದ್ದರೆ ಕೇಂದ್ರ ಸರಕಾರದ ಈ ವೈಫಲ್ಯದ ಬಗ್ಗೆ ಪ್ರತಿಭಟಿಸಲಿ ಎಂದರು.

ಗೃಹಲಕ್ಷ್ಮಿ ಯೋಜನೆ ನಿರಂತರವಾಗಿ ನಡೆಯುತ್ತಿದ್ದು, ಒಂದು ತಿಂಗಳು ಹಣ ಬರುವುದು ತಡವಾದರೂ ‘ಲಕ್ಷ್ಮೀ ಅಕ್ಕ ಗೃಹಲಕ್ಷ್ಮಿ ದುಡ್ ಎಲ್ಲಿ ಅಕ್ಕ’ ಅಂತಾರೆ, ಅಂಥವರು ಕೇಂದ್ರದ ನಾಯಕರೊಂದಿಗೆ ಮಾತ ನಾಡಿ ನರೇಗಾ ಯೋಜನೆಯ ಹಣ ಬಿಡುಗಡೆ ಮಾಡಿಸಲಿ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರಕಾರಕ್ಕೆ ಗೃಹಲಕ್ಷ್ಮೀ ಹಣ ಹೊಂದಿಸುವುದು ಹೊರೆಯಾದ ಕಾರಣ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಉತ್ತರಿಸಿದ ಸಚಿವೆ, ರಾಜ್ಯದಲ್ಲಿ ಒಟ್ಟು 1,52,00,000 ಕುಟುಂಬಗಳಿವೆ. ಇವುಗಳಲ್ಲಿ 1,26,00,000 ಕುಟುಂಬ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಿದೆ. ಪ್ರತಿತಿಂಗಳು 15ರಿಂದ 20 ಸಾವಿರ ಮಂದಿ ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಸೇರ್ಪಡೆ ಗೊಳ್ಳುತಿದ್ದಾರೆ ಎಂದವರು ಹೇಳಿದರು.

ಇತ್ತೀಚಿನ ಸಮೀಕ್ಷೆಯಂತೆ ಎರಡು ಲಕ್ಷ ಮಂದಿ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರಿದ್ದಾರೆ. ಇವರು ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಇವರಲ್ಲಿ 50,000 ಮಂದಿಯನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಈಗ 1,26,50,000 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೂ ಬಿಜೆಪಿ ಗೃಹಲಕ್ಷ್ಮೀಗೆ ಹಣವಿಲ್ಲದ ಕಾರಣ ಬಿಪಿಎಲ್ ಕಾರ್ಡ್‌ನ್ನು ವಾಪಾಸು ಪಡೆಯಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದರು.

ಸಮುದ್ರ ಕೊರೆತ ತಡೆಗೆ 60ಕೋಟಿ ಪ್ರಸ್ತಾಪ: ಜಿಲ್ಲೆಯಲ್ಲಿ ಕಡಲು ಕೊರೆತ ತಡೆಗೆ ಐದು ಕೋಟಿ ರೂ. ಮಂಜೂರಾಗಿದೆ. ಅಲ್ಲದೇ 60 ಕೋಟಿ ರೂ.ಗಳ ವೆಚ್ಚದ ಶೋರ್‌ಲೇನ್ ಮ್ಯಾನೇಜ್‌ಮೆಂಟ್ ಪ್ಲಾನ್‌ನ ಪ್ರಸ್ತಾಪ ವೊಂದು ರಾಜ್ಯ ಸರಕಾರಕ್ಕೆ ಹೋಗಿದ್ದು ಮಂಜೂರಾತಿ ಸಿಕ್ಕಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ನೀಡುವ ಕುರಿತು ಪ್ರಶ್ನಿಸಿದಾಗ, ಮಂಗಳೂರು ವಿಭಾಗಕ್ಕೆ 40 ಬಸ್‌ಗಳು ಮಂಜೂರಾಗಿದೆ. ವಿಭಾಗಕ್ಕೆ ಚಾಲಕರ ನೇಮಕಾತಿ ಪ್ರಕ್ರಿಯೆ ನಡೆಯುತಿದ್ದು, ಇದಾದ ಬಳಿಕ ಉಡುಪಿಗೆ ಅಗತ್ಯ ಬಸ್ ಹಾಗೂ ಚಾಲಕರ ನಿಯೋಜನೆಯಾಗಲಿದೆ ಎಂದರು.

ಇಂದಿನ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಸಮಗ್ರ ಚರ್ಚೆ ನಡೆದಿದೆ. ಅಜ್ಜರಕಾಡಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಸ್ಪತ್ರೆ ಪೂರ್ಣಗೊಳ್ಳಲು ಅಗತ್ಯವಿರುವ 48 ಕೋಟಿ ರೂ.ಗಳ ಅನುದಾನಕ್ಕಾಗಿ ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಆಸ್ಪತ್ರೆಯ ಕಾಮಗಾರಿಯನ್ನು ಪೂರ್ಣ ಗೊಳಿಸಲು ಅಗತ್ಯ ಕ್ರಮಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News