×
Ad

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಸಾಕ್ಷಿಗಳ ಮುಖ್ಯ ವಿಚಾರಣೆ

Update: 2025-06-20 21:25 IST

ಪ್ರವೀಣ್ ಚೌಗುಲೆ  

ಉಡುಪಿ, ಜೂ.20: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ಸಾಕ್ಷಿಗಳ ವಿಚಾರಣೆಯು ಜೂ.19 ಮತ್ತು 20ರಂದು ಉಡುಪಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ನಡೆಯಿತು.

ಮೊದಲ ದಿನ ದೂರುದಾರೆ, ಮೃತರ ಸಂಬಂಧಿ, ನೆರೆಮನೆ ನಿವಾಸಿ ಐಫಾ, ಎರಡನೇ ದಿನವಾದ ಇಂದು ಸಾಕ್ಷಿಗಳಾದ ಐಫಾ ಅವರ ತಾಯಿ ಶಾಹಿನ್ ಬೀಬಿ ಮತ್ತು ಕೊಲೆ ಮಾಡಿದ ಬಳಿಕ ಆರೋಪಿಯನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಚಾಲಕ ಶ್ಯಾಮ್ ಅವರ ಮುಖ್ಯ ವಿಚಾರಣೆಯನ್ನು ಸರಕಾರಿ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವ ನಡೆಸಿದರು.

ಮೊದಲ ದಿನ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ಪರ ವಕೀಲ ದಿಲ್‌ರಾಜ್ ಸಿಕ್ವೇರಾ, ಪ್ರಕರಣದಿಂದ ವಕಾಲತ್ತು ವಾಪಾಸ್ಸು ಪಡೆಯು ವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಆರೋಪಿ ಪ್ರವೀಣ್ ಚೌಗುಲೆ  ತನ್ನ ವಾದವನ್ನು ತಾನೇ ಮಂಡಿಸುವುದಾಗಿ ಹೇಳಿದನು. ಸಾಕ್ಷಿಗಳಿಗೆ ಪಾಟಿ ಸವಾಲು ನಾನೇ ಮಾಡುವುದಾಗಿ ತಿಳಿಸಿದನು.

ಈ ವೇಳೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಮಿವುಲ್ಲಾ ಆರೋಪಿಗೆ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿ, ಸರಕಾರದಿಂದ ಉಚಿತ ನ್ಯಾಯವಾದಿ ನೀಡುವ ಬಗ್ಗೆ ತಿಳಿಸಿದರು. ಈ ಬಗ್ಗೆ ಶುಕ್ರವಾರ ತಿಳಿಸುವುದಾಗಿ ಆರೋಪಿ ಕೋರ್ಟ್‌ಗೆ ಹೇಳಿದ್ದನು.

ಶುಕ್ರವಾರದ ವಿಚಾರಣೆ ಸಂದರ್ಭ ಆರೋಪಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನಿವೃತ್ತ ಸರಕಾರಿ ಅಭಿಯೋಜಕ ರಾಜು ಪೂಜಾರಿಯನ್ನು ವಕೀಲರಾಗಿ ನಿಯೋಜಿಸಲಾಯಿತು. ಆರೋಪಿಯ ಹಿಂದಿನ ವಕೀಲರ ಬಳಿ ಇರುವ ಎಲ್ಲ ದಾಖಲೆಗಳನ್ನು ಈಗಿನ ವಕೀಲರಿಗೆ ಸಲ್ಲಿಸಲು ಮುಂದಿನ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದರು. ಆ ದಿನದಂದೇ ಈ ಮೂರು ಸಾಕ್ಷಿಗಳ ಪಾಟಿ ಸವಾಲು ದಿನಾಂಕವನ್ನು ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News