×
Ad

ರಾಜ್ಯ ಸರಕಾರದಿಂದ ಜನಪರ ಚಿಂತನೆಯ ಆಡಳಿತ: ಸಚಿವೆ ಹೆಬ್ಬಾಳಕರ್

Update: 2025-06-21 19:29 IST

ಬೈಂದೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಜನ ಸಾಮಾನ್ಯರು, ಬಡವರ ಹಿತ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿ ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಕಂದಾಯ ಇಲಾಖೆ, ಬೈಂದೂರು ತಾಲೂಕು ಆಡಳಿತ, ಬೈಂದೂರು ಪಟ್ಟಣ ಪಂಚಾಯತ್‌ಗಳ ಜಂಟಿ ಆಶ್ರಯದಲ್ಲಿ ಶನಿವಾರ ಬೈಂದೂರಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ, ವಿಧಾನ ಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರಗಳ ವಿತರಣೆ ಮತ್ತು ವಿವಿಧ ಸರಕಾರಿ ಸವಲತ್ತುಗಳ ವಿತರಣೆ ನೆರವೇರಿಸಿ ಅವರು ಮಾತನಾಡುತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್. ಬಡವರಿಗೆ ಕಡಿಮೆ ದುಡ್ಡಿನಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಲಾಯಿತು. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ ನೀಡುವ ಮೂಲಕ ಬಡ ಮಧ್ಯಮ ವರ್ಗಕ್ಕೆ ಇಷ್ಟು ಕಡಿಮೆ ಹಣದಲ್ಲಿ ಹೊಟ್ಟೆ ತುಂಬಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯನವರ ಅಂದಿನ ಸರಕಾರದಲ್ಲಿ ಅಕ್ರಮ ಸಕ್ರಮ ಜಾರಿಗೆ ತಂದು, ಜನರಿಗೆ ಹತ್ತಿರವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಜನಸೇವೆಗೆ ಸಿಕ್ಕಂತ ಅವಕಾಶಗಳನ್ನು ಸೂಕ್ತವಾಗಿ ಬಳಸಿ ಕೊಂಡಿದ್ದೇವೆ. ರಾಜಕೀಯ ಅಷ್ಟು ಸುಲಭವಲ್ಲ, ಜನಸೇವೆಯೇ ಜನಾರ್ದನನ ಸೇವೆ ಅಂದುಕೊಂಡು ವೈಯಕ್ತಿಕ ಕೆಲಸವನ್ನು ಪಕ್ಕಕ್ಕಿಟ್ಟು ಮಾಡುತ್ತಿದ್ದೇವೆ. ಜನಪ್ರತಿನಿಧಿಗಳು ಜವಾಬ್ದಾರಿ ಅರ್ಥ ಮಾಡಿ ಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಅಂಗನವಾಡಿ ಆರಂಭವಾಗಿ 50 ವರ್ಷಗಳಾಗಿದ್ದು ಅಂಗನವಾಡಿಗಳನ್ನು ಆರಂಭಿಸಿದರು. ಈ ಹಿನ್ನೆಲೆ ಯಲ್ಲಿ ಇದೇ ಅ.2ರಂದು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಬೈಂದೂರು ಪ.ಪಂ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ನಾಗರಾಜ್ ಗಾಣಿಗ, ಮೋಹನ್ ಪೂಜಾರಿ, ಎಸ್.ರಾಜು ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಉಪ ವಿಭಾಗಧಿಕಾರಿ ರಶ್ಮಿ ಎಸ್.ಆರ್., ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರುಡೇಕರ್, ಬೈಂದೂರು ತಹಶಿಲ್ದಾರ್ ಎಚ್.ರಾಮಚಂದ್ರಪ್ಪ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಊಟ ಕೊಡಿಸಿದ ಸಚಿವರು!

ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಒಳಗೆ ಕೇಸರಿಬಾತ್, ಉಪ್ಪಿಟ್ಟು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಹೆಬ್ಬಾಳ್ಕರ್, ನಿತ್ಯವೂ ಇದೇ ಗುಣಮಟ್ಟದಲ್ಲಿ ಜನರಿಗೆ ಉಪಹಾರ, ಊಟ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.

ವಾಪಸ್ ತೆರಳುವ ವೇಳೆ ಸ್ವಾಗತಿಸಲು ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಸಚಿವರು, ಮತ್ತೆ ಕಾರಿನಿಂದ ಕೆಳಗಿಳಿದು ಕ್ಯಾಂಟೀನ್ ಒಳಗೆ ಕರೆದೊಯ್ದು ಊಟ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಕಾರಿನಲ್ಲಿ ಕುಳಿತಾಗ ಸಚಿವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಬಂದಾಗ, ಬನ್ನಿ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಿ ಎಂದು ವಿದ್ಯಾರ್ಥಿನಿಯರನ್ನು ಕೈಹಿಡಿದು ಒಳಗೆ ಕರೆದುಕೊಂಡು ಬಂದರು.

"ಉಡುಪಿ ಜಿಲ್ಲೆ ಬುದ್ದಿವಂತರ, ಸಂವೇದನಾ ಶೀಲತೆ ಹೊಂದಿರುವ ಜಿಲ್ಲೆ. ಅಧಿಕಾರಿಗಳು ಉಡುಪಿ ಜಿಲ್ಲೆಗೆ ಕೆಲಸ ಮಾಡಲು ಬರಬೇಕು ಅಂದರೆ ಹಲವು ಬಾರಿ ಯೋಚನೆ ಮಾಡುತ್ತಾರೆ. ಉಡುಪಿ ಜಿಲ್ಲಾ ಉಸ್ತು ವಾರಿ ನನಗೆ ಸಿಕ್ಕಿದ್ದು, ಶ್ರೀಕೃಷ್ಣನ ಆಶೀರ್ವಾದ ಸಿಕ್ಕಂತಾಯಿತು.ಇದು ನನ್ನ ಸೌಭಾಗ್ಯ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು".

-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News