ಕಾಂಗ್ರೆಸ್ ಅಧಿಕ್ಕಾರಕೇರಲು ಯುವ ಕಾರ್ಯಕರ್ತರ ಶ್ರಮ ಅಪಾರ: ಹೆಬ್ಬಾಳಕರ್
ಬೈಂದೂರು, ಜೂ.21: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಯುವ ಕಾರ್ಯಕರ್ತರ ಶ್ರಮ ಸಾಕಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ನಾನು ಕೂಡ ಬೂತ್ ಏಜೆಂಟ್, ಕೌಟಿಂಗ್ ಏಜೆಂಟ್ ಆಗಿ ಕೆಲಸ ಮಾಡಿರುವೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಟಿಕೆಟ್ ನೀಡಲಾಯಿತು. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬಳೇ ಮಹಿಳಾ ಮಂತ್ರಿಯಾಗಿದ್ದೇನೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಶೇಖರ್ ಪೂಜಾರಿ ನೂತನ ಅಧ್ಯಕ್ಷ ಭರತ್ ದೇವಾಡಿಗ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಅಶೋಕ್ ಕೊಡವೂರು, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ರಾಜು ಪೂಜಾರಿ, ಕಿಶನ್ ಹೆಗ್ಡೆ, ರಘುರಾಮ್ ಶೆಟ್ಟಿ, ಅರವಿಂದ್ ಪೂಜಾರಿ ಉಪಸ್ಥಿತರಿದ್ದರು.
ಸಮಾಜ ಒಡೆಯುವವರ ವಿರುದ್ಧ ಕಾನೂನು ಕ್ರಮ: ಸಚಿವೆ ಹೆಬ್ಬಾಳ್ಕರ್
ಉಡುಪಿ: ಯಾರು ಕೂಡ ಸಮಾಜದ ಕೋಮು ಸೌಹಾರ್ದತೆ ಕೆಡಿಸಬಾರದು. ಜನರ ಹಿತಾಸಕ್ತಿ ಕಾಪಾಡ ಬೇಕು. ವಿಷ ಬೀಜ ಬಿತ್ತಿ ಸಮಾಜ ಒಡೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿಗೆ ಬಾಗಲ ಕೋಟೆಗೆ ಮೂರು ತಿಂಗಳು ನಿಷೇಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ವಾಗ್ಮಿಗಳನ್ನು, ಭಾಷಣಕಾರರನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ. ಯಾವುದೇ ವಿಷಯಗಳು ವಿಷಯಧಾರಿತವಾಗಿರಬೇಕು, ವಿಷಯಾಂತರ ಆಗಬಾರದು. ಶ್ರೀಕಾಂತ ಶೆಟ್ಟಿ ಹಿಂದಿನ ಭಾಷಣಗಳನ್ನು ತೆಗೆದು ನೋಡಬೇಕು. ಆಗ ಎಲ್ಲ ವಿಚಾರ ಅರಿವಾಗುತ್ತದೆ ಎಂದರು.
ಪ್ರತಿಭಟನೆ ಹೆಸರಿನಲ್ಲಿ ಬಿಜೆಪಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಪಕ್ಷದ ಆಂತರಿಕ ಕಚ್ಚಾಟ ಗಳನ್ನು ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬಿಜೆಪಿಯ ನಾಟಕ. ವಿರೋಧ ಪಕ್ಷಕ್ಕೆ ಮಾಡಲು ಬೇರೆ ಕೆಲಸ ಇಲ್ಲ. ಇವರಿಗೆ ಕೇಂದ್ರದಿಂದ ಜಿಎಸ್‌ಟಿ ತರಲು ಆಗಿಲ್ಲ. ಅಭಿವೃದ್ಧಿಯಲ್ಲಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಇವರು ಪ್ರತಿಭಟನೆ ಮಾಡಲಿ. ಅಸಮರ್ಥ ಸಂಸದರ ಬಗ್ಗೆ ಇವರು ಪ್ರತಿಭಟನೆ ಮಾಡಲಿ. ನರೇಗಾ ಹಣ ಬಿಡುಗಡೆಯಾಗಿಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡುವ ಸಚಿವರಿಗೆ ನೈತಿಕತೆ ಇಲ್ಲ ಎಂಬ ಸುನೀಲ್ ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕ ಸುನೀಲ್ ಕುಮಾರ್ ಅವರಿಂದ ನಾವು ನೈತಿಕ ಪಾಠ ಕಲಿಯಬೇಕಿಲ್ಲ. ಅವರು ಮೊದಲು ನೈತಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಕಿಡಿಕಾರಿದರು.