×
Ad

"ಸ್ವಪಕ್ಷೀಯರ ಬಹಿರಂಗ ಹೇಳಿಕೆ; ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ"

Update: 2025-06-24 20:58 IST

ಕೋಟೇಶ್ವರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಇಂದು 135 ಮಂದಿ ಶಾಸಕರಿದ್ದಾರೆ. ಇವರಲ್ಲಿ ಒಬ್ಬಿಬ್ಬರು ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಇದು ಸರಿಯಲ್ಲ ಎಂದು ರಾಜ್ಯದ ಅನುಭವಿ ರಾಜಕಾರಣಿ ಹಾಗೂ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

ಕುಂದಾಪುರ ತಾಲೂಕು ಕೋಟೇಶ್ವರದ ಪುರಾಣಪ್ರಸಿದ್ಧ ಕೋಟಿಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೋಟೇಶ್ವರ ಸೇವಾ ಟ್ರಸ್ಟ್ ಕಚೇರಿ ಹಾಗೂ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಶೌಚಾಲಯವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಉತ್ತಮ ಆಡಳಿತಕ್ಕಾಗಿ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಗೆದ್ದಿರುವವರು ಇದನ್ನು ತಿಳಿದುಕೊಳ್ಳಬೇಕು. ಎಲ್ಲರೂ ಮಂತ್ರಿ, ನಿಗಮ ಅಧ್ಯಕ್ಷ ಆಗಲು ಸಾಧ್ಯವಿಲ್ಲ. ಗೆದ್ದವರು ಸ್ವಲ್ಪ ಸಮಾಧಾನದಿಂದ ಇರಬೇಕು. ಸಮಾಧಾನದಿಂದ ಇರದಿದ್ದರೆ ಮುಂದಕ್ಕೆ ಅಪಾಯ ಇದೆ ಎಂದು ಅವರು ಅತೃಪ್ತ ಶಾಸಕರಿಗೆ ಕಿವಿಮಾತು ಹೇಳಿದರು.

ಕೇಂದ್ರಕ್ಕೆ ಕಣ್ಣು-ಕಿವಿ ಇಲ್ಲ: ಎಲ್ಲಾ ಶಾಸಕರಿಗೂ ಅನುದಾನ ಬರುತ್ತದೆ. ಆದರೆ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಎಂದ ರೆಡ್ಡಿ, ರಾಜ್ಯದ ಅಭಿವೃದ್ಧಿಗೆ ಅನುದಾನ ಕೊರತೆಗೆ ಕೇಂದ್ರ ಸರಕಾರದ ಧೋರಣೆಯನ್ನು ದೂರಿದರು.

ರಾಜ್ಯದಿಂದ ನಾಲ್ಕೂವರೆ ಲಕ್ಷ ಕೋಟಿ ರೂ. ಜಿಎಸ್ಟಿ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಆದರೆ ಅದರಲ್ಲಿ ಅವರು ರಾಜ್ಯಕ್ಕೆ ನೀಡುವುದು ಕೇವಲ 50,000 ಕೋಟಿ ರೂ.ಮಾತ್ರ. ಭರ್ತಿ 4 ಲಕ್ಷ ಕೋಟಿ ರೂ. ರಾಜ್ಯ ದಿಂದ ಕೇಂದ್ರದ ಪಾಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ದುಡ್ಡು ಕೊಟ್ಟರೂ ನಮ್ಮ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದರು.

ಈ ಬಗ್ಗೆ ನಾವು ಡೆಲ್ಲಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ. ನಾವು ಕೂತಿರೋದನ್ನು ಅವರು ನೋಡೊದೇ ಇಲ್ಲ ಎಂದು ಕೇಂದ್ರದ ಧೋರಣೆಯನ್ನು ಟೀಕಿಸಿದರು.

ರಾಜ್ಯದಲ್ಲಿ ನಯಾಪೈಸೆ ಅನುದಾನ ಸಿಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಪಕ್ಷದ ಕೆಲವು ಶಾಸಕರ ದೂರಿನ ಬಗ್ಗೆ ಪ್ರಶ್ನಿಸಿದಾಗ, ನೋಡಿ ನಮ್ಮ ಸಿಎಂ, ಡಿಸಿಎಂ ಪ್ರತೀ ವಾರ ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಅಭಿವೃದ್ಧಿ ಚಟುವಟಿಕೆ ದುಡ್ಡಿಲ್ಲದೆ ನಡೆಯಲು ಸಾಧ್ಯವಾ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದಿರುವ ಗೃಹಸಚಿವ ಜಿ. ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗ ರೆಡ್ಡಿ, ಕಳೆದ ವಾರ ಅತಿ ಹೆಚ್ಚು ಹಣ ತುಮಕೂರು ಜಿಲ್ಲೆಗೆ ಅವರ ಕ್ಷೇತ್ರಕ್ಕೆ ಹೋಗಿದೆ. ನಮ್ಮ ಮುಖ್ಯಮಂತ್ರಿಗಳು ತಾರತಮ್ಯ ಮಾಡಲ್ಲ. ಎಲ್ಲರಿಗೂ ಸಮನಾದ ಅನುದಾನ ಹಂಚಿಕೆಯಿಂದ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದರು.

ರಾಜ್ಯ ಸರಕಾರ ಎದುರಿಸುತ್ತಿರುವ ಹೊಸ ಬಿಕ್ಕಟ್ಟಿನಲ್ಲಿ ಅಧಿಕಾರ ಹಂಚಿಕೆ ಎರಡೂವರೆ ವರ್ಷದ ಗಡುವಿನ ಪಾತ್ರ ಏನಾದರೂ ಇದೆಯೇ ಎಂದು ಸಾರಿಗೆ ಸಚಿವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ನಾನು ಮಾತನಾಡು ವುದಿಲ್ಲ. ಗಡುವಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ವಸತಿ ಇಲಾಖೆಯ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಸಚಿವ ಜಮೀರ್ ಒತ್ತಾಯಿಸಿದ ಬಗ್ಗೆ ಕೇಳಿದಾಗ, ನನಗೆ ಅದರ ಬಗ್ಗೆ ಗೊತ್ತಿಲ್ಲಾಪ್ಪ ಎಂದು ಸಚಿವರು ಮುಂದಕ್ಕೆ ನಡೆದರು.

ಉಡುಪಿಗೆ ನರ್ಮ್ ಬಸ್, ಚಾಲಕರ ನಿಯೋಜನೆ

ಸಾರಿಗೆ ಇಲಾಖೆಯ ಕೆಎಸ್ಸಾರ್ಟಿಸಿಯಲ್ಲಿ ಚಾಲಕರ ತೀವ್ರ ಕೊರತೆ ಇತ್ತು. ಅದರಲ್ಲೂ ಪುತ್ತೂರು, ಮಂಗಳೂರು, ಚಾಮರಾಜನಗರ, ರಾಮನಗರ ವಿಭಾಗಗಳಲ್ಲಿ ಚಾಲಕರ ಅಧಿಕ ಕೊರತೆ ಇತ್ತು. ಇದೀಗ 2,000 ಚಾಲಕರ ನೇಮಕಕ್ಕೆ ಆದೇಶ ಪತ್ರ ಕೊಟ್ಟಿದ್ದೇವೆ. ಹೀಗಾಗಿ ಚಾಲಕರ ಕೊರತೆ ಗಣನೀಯವಾಗಿ ನೀಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

ಇವರಲ್ಲಿ ಮಂಗಳೂರು ವಿಭಾಗಕ್ಕೆ ಸುಮಾರು 300 ಮಂದಿ ಚಾಲಕರನ್ನು ನಿಯೋಜಿಸಿದ್ದೇವೆ. ಉಡುಪಿಗೂ ಇನ್ನೂರಕ್ಕೂ ಹೆಚ್ಚು ಚಾಲಕರ ವ್ಯವಸ್ಥೆ ಮಾಡಲಿದ್ದೇವೆ. ಹೀಗಾಗಿ ಇನ್ನು ಮುಂದೆ ಚಾಲಕರ ಕೊರತೆ ಇರೋದಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ಸಚಿವರು ತಿಳಿಸಿದರು.

ಉಡುಪಿ ನಗರಕ್ಕೆ ನರ್ಮ್ ಬಸ್‌ಗಳ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಅಧಿಕ ಬಸ್‌ಗಳ ಬೇಡಿಕೆ ಕುರಿತು ಪ್ರಶ್ನಿಸಿದಾಗ, ಈ ಬಾರಿ ಸುಮಾರು 700-800 ಹೊಸ ಬಸ್‌ಗಳನ್ನು ಕೆಎಸ್ಸಾರ್ಟಿಸಿಗೆ ಕೊಡುತ್ತೇವೆ ಇದರಲ್ಲಿ ಮಂಗಳೂರು ವಿಭಾಗಕ್ಕೆ 70ರಿಂದ 80ರಷ್ಟು ಬಸ್ ಬರಲಿದೆ. ಅದರಲ್ಲಿ ಉಡುಪಿಗೆ ನೀಡಲಾಗುವುದು ಎಂದರು.

ಒಂದು ದೇವಸ್ಥಾನದ ಹಣ, ಇನ್ನೊಂದಕ್ಕೆ ನೀಡಲು ಆಗುವುದಿಲ್ಲ

ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಸ್ಥಾನ ಹಾಗೂ ಕೊಲ್ಲೂರು ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರೆಡ್ಡಿ, ಕೊಲ್ಲೂರಿಗೆ ಲಕ್ಷಗಟ್ಟಲೆ ಜನ ಬರುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯಗಳು ಇರಲೇಬೇಕಾಗುತ್ತದೆ.ಕ್ಷೇತ್ರದಲ್ಲಿ ಏನೇನು ನ್ಯೂನ್ಯತೆಗಳಿವೆ ಅದನ್ನು ಸರಿ ಮಾಡುವ ಕೆಲಸ ಮಾಡಬೇಕು, ಮಾಡುತ್ತೇನೆ ಎಂದರು.

ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ಯಾವುದೇ ಕೊರತೆ ಇಲ್ಲ. ಅಭಿವೃದ್ಧಿ ಕೆಲಸ ಮಾಡುವ ಮನಸ್ಸು ಮಾಡಬೇಕಷ್ಟೆ. ಆಡಳಿತ ಅಧಿಕಾರಿ ಇಒ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ರಾಜ್ಯದ ಮಲೆ ಮಾದೇಶ್ವರ, ಚಾಮುಂಡಿ ಬೆಟ್ಟ, ಹುಲಿಗೆಮ್ಮ ದೇವಸ್ಥಾನ, ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕೆಲಸ ಪ್ರಾರಂಭ ಮಾಡಿದ್ದೇವೆ. ಮೂರ್ನಾಲ್ಕು ವರ್ಷದಲ್ಲಿ ಅಭಿವೃದ್ಧಿಯಾಗುತ್ತದೆ. ಹೆಚ್ಚು ಭಕ್ತರು ಬರುವ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ ಹೆಚ್ಚು ಆದ್ಯತೆ ಕೊಟ್ಟು ಕೆಲಸ ಮಾಡುತ್ತೇವೆ ಎಂದರು.

ಕ್ಷೇತ್ರದಲ್ಲಿ ಭಕ್ತರಿಂದ ಸಂಗ್ರಹವಾಗುವ ಹಣವನ್ನು ಬೇರೆ ಕಡೆಗೆ ನೀಡುವ ದೂರಿನ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ಕ್ಷೇತ್ರದ ಹಣ ಕ್ಷೇತ್ರಕ್ಕೆ. ಬೇರೆ ದೇವಸ್ಥಾನಕ್ಕೂ ಕೊಡಲು ಸಾಧ್ಯವಿಲ್ಲ. ಆಯಾ ದೇವಸ್ಥಾನದ ಹಣ ಆಯಾ ದೇವಸ್ಥಾನದ ಅಕೌಂಟ್‌ನಲ್ಲಿ ಇರಬೇಕು ಎಂದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News