×
Ad

‘ನಮ್ಮ ನಡಿಗೆ ಪಂಚಾಯತ್ ಕಡೆಗೆ’ ಪಂಚಗ್ಯಾರಂಟಿ ಯೋಜನೆ ಮಾಹಿತಿ ಕಾರ್ಯಾಗಾರ: ರಮೇಶ್ ಕಾಂಚನ್

Update: 2025-07-02 19:27 IST

ಉಡುಪಿ, ಜು.2: ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ರಾಜ್ಯ ಸರಕಾರದ ಪಂಚಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ನಮ್ಮ ನಡಿಗೆ ಪಂಚಾಯತ್ ಕಡೆಗೆ ಎಂಬ ಕಾರ್ಯಕ್ರಮವನ್ನು ವಾರದೊಳಗೆ ಆರಂಭಿಸ ಲಾಗುವುದು ಎಂದು ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪಂಚಾಯತ್‌ಗಳಿಗೆ ಭೇಟಿ ನೀಡಿ, ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳನ್ನು ಸೇರಿಸಿ ಮಾಹಿತಿ ಕಾರ್ಯಾಗಾರ ವನ್ನು ನಡೆಸಿ ಯೋಜನೆಗಳ ಮಾಹಿತಿ ನೀಡುವ ಕಾರ್ಯ ಮಾಡಲಾಗುವುದು ಎಂದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಭೆಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಯೋಜನಾಧಿಕಾರಿ, ಈ ಯೋಜನೆಯಲ್ಲಿ ಈವರೆಗೆ ಉಡುಪಿ ತಾಲೂಕಿನ ಒಟ್ಟು 765618 ಮಂದಿಗೆ ಒಟ್ಟು 153,12,36000ರೂ. ಹಣ ಪಾವತಿಯಾಗಿದೆ. ಈ ಹಿಂದೆ ಸರಕಾರವೇ ನೇರವಾಗಿ ಹಣ ಬಿಡುಗಡೆ ಮಾಡುತ್ತಿದ್ದು, ಎಪ್ರಿಲ್‌ನಿಂದ ಇಲಾಖೆಯ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಅದರಂತೆ ಎಪ್ರಿಲ್ ಮತ್ತು ಮೇ ತಿಂಗಳಿಗೆ ಒಟ್ಟು 40,83,93,889ರೂ. ಹಣ ಬಿಡುಗಡೆಯಾಗಿದ್ದು, ಅದರಲ್ಲಿ ಒಟ್ಟು 80498 ಫಲಾನುಭವಿಗಳಿಗೆ 40,54,16,000ರೂ. ವಿತರಿಸಲಾಗಿದೆ. ಉಳಿಕೆ ಹಣವನ್ನು ಮುಂದಿನ ತಿಂಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ಗೃಹಜ್ಯೋತಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಮೆಸ್ಕಾಂ ಅಧಿಕಾರಿ ಗಣರಾಜ ಭಟ್, ಮೇ ತಿಂಗಳಲ್ಲಿ ಉಡುಪಿ, ಕಲ್ಯಾಣಪುರ ಹಾಗೂ ಮಣಿಪಾಲ ಉಪವಿಭಾಗದಲ್ಲಿ ಒಟ್ಟು 40693 ಮನೆಗಳಿಗೆ 3.86ಕೋಟಿ ರೂ. ಮೊತ್ತ ಉಚಿತ ವಿದ್ಯುತ್ ನೀಡಲಾಗಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿ ಸಹಾಯಕ ಸಂಚಾರ ನಿರೀಕ್ಷಕ ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ 10,98,750 ಮಹಿಳೆಯರು ಹಾಗೂ 19ಸಾವಿರ ಮಕ್ಕಳು ಸೇರಿದಂತೆ ಒಟ್ಟು 11.17ಲಕ್ಷ ಮಂದಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಅದಕ್ಕಾಗಿ 4,73,66,593ರೂ. ವ್ಯಯಿಸಲಾ ಗಿದೆ ಎಂದು ಹೇಳಿದರು.

ಯುವನಿಧಿ ಯೋಜನೆಯಡಿ 704 ಮಂದಿ ನೋಂದಾಯಿಸಿಕೊಂಡಿದ್ದು, ಅದರಲ್ಲಿ 588 ಮಂದಿಗೆ ಮೇ ತಿಂಗಳವರೆಗೆ ಒಟ್ಟು 104,11000ರೂ. ಹಣ ನೀಡಲಾಗಿದೆ ಎಂದು ತಿಳಿಸಿದರು. ಯುವನಿಧಿ ಯೋಜನೆ ಬಗ್ಗೆ ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗುವುದು ಎಂದು ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದರು.

5 ಹೊಸ ಬಸ್ ಪುನಾರಂಭ: ಪರ್ಕಳ- 80 ಬಡಗುಬೆಟ್ಟು ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಈ ಹಿಂದೆ ಸ್ಥಗಿತಗೊಂಡಿದ್ದ ಪೆರ್ಣಂಕಿಲ, ಮೂಡುಬೆಳ್ಳೆ, ಬೆಂಗ್ರೆ ಮಾರ್ಗದಲ್ಲಿ ತಲಾ ಒಂದು ಹಾಗೂ ಹೆಬ್ರಿ ಮಾರ್ಗದಲ್ಲಿ ಎರಡು ಬಸ್‌ಗಳನ್ನು ಮುಂದಿನ ವಾರದೊಳಗೆ ಪುನಾರಂಭಿಸ ಲಾಗುವುದು ಎಂದು ಅಧಿಕಾರಿ ರವೀಂದ್ರ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಕೆಲವು ಅರ್ಜಿಗಳನ್ನು ಐಟಿ, ಜಿಎಸ್‌ಟಿ ಕಾರಣಕ್ಕೆ ತಿರಸ್ಕೃತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಮೇಶ್ ಕಾಂಚನ್, ಅಂತಹ ಅರ್ಜಿಗಳ ಪಟ್ಟಿ ಮಾಡಿ ನಮಗೆ ಕೊಟ್ಟರೆ ನಾವು ಜಿಲ್ಲಾ ಸಮಿತಿಯ ಮೂಲಕ ರಾಜ್ಯ ಸರಕಾರ ಕಳುಹಿಸಿ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದರು.

ಒಂದೇ ಮನೆಯಲ್ಲಿ ಎರಡು ಡೋರ್ ನಂಬರ್ ಪಡೆದು ಎರಡು ಪಡಿತರ ಚೀಟಿ ಮಾಡಿ ಯೋಜನೆಗಳನ್ನು ಪಡೆಯಲಾಗುತ್ತಿದೆ. ಇಂತಹ ಅಕ್ರಮ ಪಡಿತರ ಚೀಟಿಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ, ಸಹಾಯಕ ನಿರ್ದೇಶಕಿ ಫರ್ಯಾನಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅನರ್ಹ ಬಿಪಿಎಲ್ ಕಾರ್ಡ್ ರದ್ಧತಿ

ಅನರ್ಹ ಪಡಿತರ ಚೀಟಿಗಳನ್ನು ಬಿಪಿಎಲ್‌ನಿಂದ ಎಪಿಎಲ್ ಮಾಡಲು ಸರಕಾರ ಆದೇಶ ನೀಡಿದ್ದು, ಅಂತಹ ಚೀಟಿದಾರರ ಬಗ್ಗೆ ಮಾಹಿತಿ ನೀಡುವಂತೆ ಆಹಾರ ನಿರೀಕ್ಷಕರು ಸಭೆಗೆ ತಿಳಿಸಿದರು.

ಕುಟುಂಬದಲ್ಲಿ ಯಾರಾದರೂ ಸರಕಾರಿ ನೌಕರರಿದ್ದರೆ, ಒಂದು ವಾಣಿಜ್ಯ ವಾಹನ ಹೊರತು ಪಡಿಸಿ ಬೇರೆ ನಾಲ್ಕು ಚಕ್ರದ ವಾಹನ ಇದ್ದರೆ, ಒಂದು ಸಾವಿರ ಚದರಅಡಿಕ್ಕಿಂದ ಹೆಚ್ಚು ವಿಸ್ತ್ರೀರ್ಣದ ಮನೆ ಇದ್ದರೆ, 3.5 ಎಕರೆಗಿಂತ ಹೆಚ್ಚಿನ ಜಮೀನು ಇದ್ದರೆ ಅಂತಹ ಕುಟುಂಬದ ಎಪಿಲ್ ಕಾರ್ಡ್ ರದ್ದುಗೊಳಿಸಲಾಗುವುದು ಎಂದರು.

ಕಾರ್ಡ್ ರದ್ಧತಿ ಬಗ್ಗೆ ಪಡಿತರ ಅಂಗಡಿಯವರೇ ಅಪಪ್ರಚಾರ ಮಾಡು ತ್ತಿದ್ದಾರೆ. ಅವರು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಅಧಿಕಾರಿಗಳು ಕ್ರಮ ಜರಗಿಸಬೇಕು ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News