×
Ad

ರಾಜ್ಯದಲ್ಲಿ ಸೌಹದರ್ತೆ, ಕಾನೂನು ಪಾಲನೆ ಕುರಿತು ಜಾಗೃತಿ: ಸುಧೀರ್ ಮುರೋಳಿ

Update: 2025-07-02 19:36 IST

ಉಡುಪಿ, ಜು.2: ಸಮಾಜಕ್ಕೆ ಹಾಗೂ ನ್ಯಾಯಾಂಗದ ನಡುವಿನ ಅಂತರ ವನ್ನು ಕಡಿಮೆಗೊಳಿಸಿ ಪ್ರತಿಯೊಬ್ಬ ಸಂತ್ರಸ್ಥನಿಗೆ ಭಾರತದ ಸಂವಿಧಾನ ಕೊಡ ಮಾಡಿದ ಮಾನವಹಕ್ಕುಗಳನ್ನು ದೊರಕಿಸಿ ಕೊಡುವುದು ಎಪಿಸಿಆರ್‌ನ ಉದ್ದೇಶವಾಗಿದೆ. ರಾಜ್ಯದಲ್ಲಿ ಸೌಹದರ್ತೆ, ಕಾನೂನು ಪಾಲನೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಪಿಸಿಆರ್ ಕಾರ್ಯ ನಿರ್ವಹಿಸಲಿದೆ ಎಂದು ಅಸೊಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ.

ಹೂಡೆಯ ಸಾಲಿಹಾತ್ ಅಡಿಟೋರಿಯಮ್‌ನಲ್ಲಿ ಆಯೋಜಿಸಲಾದ ಅಸೊಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕರ್ನಾಟಕ ಚಾಪ್ಟರ್ ಇದರ ಕರಾವಳಿ ವಲಯದ ಜಿಲ್ಲೆಗಳಾದ ಉಡುಪಿ, ದ.ಕ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಮರ್ದಿತರ ಪರವಾಗಿ ಎಪಿಸಿಆರ್ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು ದೇಶದಲ್ಲಿ ಬಡ ಸಂತ್ರಸ್ಥರ ಪರವಾಗಿ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಎಪಿಸಿಆರ್ ಸಕ್ರಿಯವಾಗಿದ್ದು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ತನ್ನ ಸಮಿತಿಗಳನ್ನು ರಚಿಸಿ ಕಾರ್ಯಚರಿಸುತ್ತಿದೆ. ಇದೀಗ ವಲಯವಾರು ಸಭೆಗಳ ಮೂಲಕ ಜಿಲ್ಲೆಯ ಪ್ರಮುಖ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿ ಎಪಿಸಿಆರ್‌ನ್ನು ಮತ್ತಷ್ಟು ಸುಧೃಡಗೊಳಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಎಪಿಸಿಆರ್ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ನಿಯಾಝ್ ಅಹ್ಮದ್ ಎಪಿಸಿಆರ್‌ನ ಕಾರ್ಯ ಚಟುವಟಿ ಕೆಗಳ ವರದಿಯನ್ನು ಮಂಡಿಸಿದರು. ನಂತರ ಐದು ಜಿಲ್ಲೆಯ ಪ್ರತಿನಿಧಿಗಳು ತಮ್ಮ ಸಲಹೆ, ಅಭಿಪ್ರಾಯ ಗಳನ್ನು ಹಂಚಿ ಕೊಂಡರು. ಉಡುಪಿ ಜಿಲ್ಲೆ, ದ.ಕ, ಉ.ಕ,ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಎಪಿಸಿಆರ್ ರಾಜ್ಯ ಉಪಾಧ್ಯಕ್ಷೆ ಅಡ್ವಕೇಟ್ ಅಖಿಲಾ, ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಬಿಟಿ ವೆಂಕಟೇಶ್, ಫಾದರ್ ಜೆರಾಲ್ಡ್ ಡಿಸೋಜ, ಮೆಹದಿ ಕಲೀಮ್, ಅಕ್ಮಲ್ ರಜ್ವಿ, ಅಬ್ದುಲ್ ಸಲಾಂ, ಮೊಹಮ್ಮದ್ ಕುಂಞಿ, ಅಫ್ವಾನ್ ಮತ್ತು ಹರ್ಷ ಕುಮಾರ್ ಕುಗ್ವೆ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News