×
Ad

ತಡೆಬೇಲಿ ಇಲ್ಲದೆ ಅಪಾಯ ಆಹ್ವಾನಿಸುತ್ತಿರುವ ಕಾಲುಸೇತುವೆ!

Update: 2025-07-02 19:49 IST

ಉಡುಪಿ, ಜು.2: ಮೂಡನಿಡಂಬೂರು ಗ್ರಾಮದ ಬನ್ನಂಜೆ ವಾರ್ಡಿನ ಬ್ರಹ್ಮಬೈರ್ದಕಳ ಗರಡಿ ರಸ್ತೆಯಲ್ಲಿರುವ ಸಾರ್ವಜನಿಕ ನಾಗಬನದ ಹತ್ತಿರ ನೀರು ಹರಿಯುವ ಕಾಲುವೆಗೆ ನಿರ್ಮಿಸಲಾದ ಕಾಲುಸೇತುವೆಯು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ.

ಈ ಕಾಲುವೆಯು ಗರಡಿ ಸಮೀಪ ಹರಿಯುವ ಇಂದ್ರಾಣಿ ನದಿಯನ್ನು ಸಂಪರ್ಕಿಸುತ್ತದೆ. ನಾಗಬನ ಸನಿಹದ ಕಾಲುವೆಗೆ ಕಾಲುಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಕಳೆದ ಅರವವತ್ತು ವರ್ಷಗಳ ಹಿಂದೆಯೇ ನಿರ್ಮಿಸಲ್ಪಟ್ಟ ಕಾಲುಸೇತುವೆ ಎಂದು ಹೇಳಲಾಗುತ್ತಿದೆ.

ಸೇತುವೆ ಎರಡೂ ಪಾರ್ಶ್ವಗಳಲ್ಲಿಯೂ ರಕ್ಷಣಾ ಬೇಲಿ ಉರುಳಿಬಿದ್ದು ಹಲವು ವರ್ಷಗಳೇ ಕಳೆದುಹೋಗಿವೆ. ಇಲ್ಲಿ ಪಾದಚಾರಿಗಳು ಆಯತಪ್ಪಿ ಕಾಲುವೆಗೆ ಬೀಳುವ ಘಟನೆಗಳು ಸಂಭವಿಸುತ್ತಲೆ ಇರುತ್ತದೆ. ಅರ್ಕದ ಕಟ್ಟೆ, ಗರಡಿ, ನಿಟ್ಟೂರು ಭಾಗದ ನಾಗರಿಕರು, ವಲಸೆ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜು ಗಳ ವಿದ್ಯಾರ್ಥಿಗಳು ಉಡುಪಿ ನಗರಕ್ಕೆ ತೆರಳಲು ಈ ಕಾಲುಸೇತುವೆಯನ್ನು ಬಳಸುತ್ತಾರೆ.

ಸಂಕದ ಮೇಲೆ, ದಿನವೊಂದರಲ್ಲಿ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನ ಸಂಚರಿಸುವುದು ಕಂಡು ಬರುತ್ತದೆ. ಶಾಲಾ ಮಕ್ಕಳು ಕಾಲುಜಾರಿ ಕಾಲುವೆಗೆ ಎಡವಿಬಿದ್ದರೆ ನೀರಲ್ಲಿ ಕೊಚ್ಚಿಹೋಗುವ ಹಾಗೂ ಹಿರಿಯ ನಾಗರಿಕರು ನಡೆದು ಸಾಗುವಾಗ ದೇಹ ನಿಯಂತ್ರಣ ಸಿಗದೆ, ಬೀಳುವ ಸಾಧ್ಯತೆಗಳು ಇಲ್ಲಿ ಹೆಚ್ಚಿದೆ.

ಈ ಸ್ಥಳದಲ್ಲಿ ಬೀದಿದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ವಿಷ ಜಂತುಗಳ ಸಂಚಾರವು ಇಲ್ಲಿದೆ. ಸೇತುವೆ ತಳಭಾಗವು ಶಿಥಿಲವಾಗಿದ್ದು ಸರಳುಗಳು ಕಾಣುತ್ತಿವೆ. ನಗರಾಡಳಿತ, ಜಿಲ್ಲಾಡಳಿತ, ಸ್ಥಳಿಯ ಶಾಸಕರು, ಸಂಸದರು ತುರ್ತಾಗಿ ಈ ಸ್ಥಳದಲ್ಲಿ ಹೊಸದಾದ ಅಗಲವಾದ ಕಾಲುಸೇತುವೆ ನಿರ್ಮಿಸ ಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News