×
Ad

ಉಡುಪಿ: ಹಡಪದ ಅಪ್ಪಣ್ಣ ಜಯಂತಿ ಆಚರಣೆ

Update: 2025-07-10 19:16 IST

ಉಡುಪಿ: ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ, 12 ಶತಮಾನದಲ್ಲಿ ಸಮಾಜವು ಎದುರಿಸುತ್ತಿದ್ದ ಮೌಢ್ಯತೆ ಗಳನ್ನು ಧಿಕ್ಕರಿಸಿ, ಸಮಾನತೆಗಾಗಿ ಹೋರಾಡುವ ಮೂಲಕ ನಾಡು ನುಡಿಗಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದ್ದಾರೆ.

ಕುಂಜಿಬೆಟ್ಟಿನಲ್ಲಿರುವ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಡಪದ ಅಪ್ಪಣ್ಣರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಡಾ.ಟಿ.ಎಂ.ಎ.ಪೈ ಮಹಾದ್ಯಾಲಯದ ಪ್ರಾಂಶುಪಾಲ ಡಾ. ಮಹಾ ಬಲೇಶ್ವರ ರಾವ್ ಮಾತನಾಡಿ, ವಚನಕಾರರು ಕಾಯಕವೇ ಶ್ರೇಷ್ಠವಾದದ್ದು, ಕಾಯಕದಲ್ಲಿ ಮೇಲು-ಕೀಳು ಎಂಬ ಯಾವುದೇ ತಾರತ ಮ್ಯವಿಲ್ಲ, ಎಲ್ಲಾ ಕಾಯಕಗಳು ಸಮಾನತೆಯ ಒಟ್ಟು ಬಾಳ್ವೆಗೆ ಪೂರಕ ಎಂಬುದನ್ನು ತಿಳಿಸುವ ಮೂಲಕ ಶ್ರಮ ಗೌರವದ ತತ್ವವನ್ನು ಪ್ರತಿಪಾದಿಸಿದರು. ಇಂದಿನ ಯುವ ಪೀಳಿಗೆ, ಶರಣರು ಬರೆದ ವಚನಗಳನ್ನು ಓದುವ ಮೂಲಕ ಅದರಲ್ಲಿರುವ ಮೌಲ್ಯ ಶಿಕ್ಷಣವನ್ನು ತಿಳಿದುಕೊಳ್ಳಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್ ಸಿದ್ದಾಪುರ ಶಿವಶರಣ ಹಡಪದ ಅಪ್ಪಣ್ಣರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಡಪದ ಅಪ್ಪಣ್ಣರ ಸಿದ್ದಾಂತದಂತೆ ಪ್ರತಿಯೊಬ್ಬರು ತಮ್ಮ ಕಾಯಕದ ಕುರಿತು ಯಾವುದೇ ಕೀಳರಿಮೆ ಇಲ್ಲದೇ ಗೌರವ ಮತ್ತು ಪ್ರಾಮಾಣಿಕತೆ ಹೊಂದಿದಾಗ ಮಾತ್ರ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ ಸಮಾಜದಲ್ಲಿದ್ದ ಅಸಮಾನತೆ, ಅಸ್ಪಶ್ಯತೆ, ಮೂಢನಂಬಿಕೆಯನ್ನು ಹೋಗಲಾಡಿಸಿ ಸಾಮಾಜಿಕ ಬದಲಾವಣೆಗಳಿಗಾಗಿ ಶ್ರಮಿಸಿದ ಹಡಪದ ಅಪ್ಪಣ್ಣರ ಬದುಕು, ಆದರ್ಶಮಯ ಸಿದ್ದಾಂತ ನಮ್ಮೆಲ್ಲರಿಗೂ ಸ್ಪೂರ್ತಿ ಮತ್ತು ಮಾದರಿ ಎಂದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ತೇಜಸ್ ಜೆ ಬಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News