×
Ad

ಹಂಗಾರಕಟ್ಟೆ: ಬಾಳ್ಕುದ್ರು ಕೈಂಡ್ ಹಾರ್ಟ್‌ನಿಂದ ಪ್ರತಿಭಾ ಪುರಸ್ಕಾರ

Update: 2025-07-10 21:12 IST

ಬ್ರಹ್ಮಾವರ: ದೂರದೃಷ್ಠಿಯೊಂದಿಗೆ ಗುರಿ ಮತ್ತು ಉದ್ದೇಶವನ್ನು ಹೊಂದಿರುವ ಸಂಸ್ಥೆ ದೀರ್ಘ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ.ಸುನೀಲ್ ಡಿಸಿಲ್ವಾ ಹೇಳಿದ್ದಾರೆ.

ಹಂಗಾರಕಟ್ಟೆ ಬಾಳ್ಕುದ್ರು ಕೈಂಡ್ ಹಾರ್ಟ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇವರ ಆಶ್ರಯದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಬ್ರಹ್ಮಾವರದ ರೋಟರಿ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

‘ನಾವು ನೀಡುವ ಸೇವೆ ಇನ್ನೊಬ್ಬರ ಹೃದಯವನ್ನು ಮುಟ್ಟುವಂತಿರಬೇಕು. ನಿರಂತರ ಉತ್ತಮ ಕಾರ್ಯ ಗಳ ಮೂಲಕ ನಾವು ಸಮಾಜದಲ್ಲಿ ಶಾಶ್ವತವಾದ ಹೆಸರು ಮಾಡಬೇಕು. ಇನ್ನೊಬ್ಬರಿಗೆ ಮುಕ್ತ ಹೃದಯ ದಿಂದ ಮಾಡಿದ ಸೇವೆಗೆ ಪ್ರತಿಫಲ ಸದಾ ಇರುತ್ತದೆ. ಆದ್ದರಿಂದ ನಮ್ಮ ಸೇವೆಯನ್ನು ಪ್ರೀತಿಯಿಂದ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ.ಮಥಾಯಸ್ ಡಾಯಸ್ ಮಾತನಾಡಿ, ವಿದ್ಯಾರ್ಥಿ ಗಳ ಸಾಧನೆ ಕೇವಲ ಹೆತ್ತವರಿಗೆ ಮಾತ್ರವಲ್ಲದೆ ಸಮಾಜಕ್ಕೂ ಗೌರವ ತಂದು ಕೊಡುತ್ತದೆ. ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಹೆತ್ತವರ ಪಾತ್ರ ಮಹತ್ವದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ತೋರುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 10 ಪ್ರೌಢ ಶಾಲೆಗಳ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೈಂಡ್ ಹಾರ್ಟ್ ಟ್ರಸ್ಟ್ ಅಧ್ಯಕ್ಷ ಹೆನ್ರಿ ಲೂವಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್‌ನ ಹಲವು ಹಲವು ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರದ ಸತೀಶ್ ಶೆಟ್ಟಿ ವಹಿಸಿದ್ದರು. ವಾಲ್ಟರ್ ಸಿರಿಲ್ ಪಿಂಟೊ, ಜಗದೀಶ್ ಕೆಮ್ಮಣ್ಣು, ಶ್ರೀಧರ್ ಶೆಟ್ಟಿ, ಹರೀಶ್ ಕುಂದರ್, ಚೇತನಾ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಉಪಸ್ಥಿತರಿದ್ದರು.

ಡೆನಿಸ್ ರೊಡ್ರಿಗಸ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ರೂಬಿನಾ ರೊಡ್ರಿಗಸ್ ಸ್ವಾಗತಿಸಿ, ಸುಜಾತಾ ಅಂದ್ರಾದೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News