ಹೆಬ್ರಿ: ರಾಜ್ಯ ಮಟ್ಟದ ಲಕ್ಷ ವೃಕ್ಷ ಗಿಡಗಳ ನಾಟಿಗೆ ಚಾಲನೆ
ಹೆಬ್ರಿ, ಜು.12: ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಮೂಡಬಿದರೆ ಉಪವಿಭಾಗ ಹೆಬ್ರಿ ವಲಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ರಿಯ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳ ಲಾಗಿರುವ ‘ಲಕ್ಷ ವೃಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನೆಲ ಜಲ ಪ್ರಾಣಿ ಸಂಕುಲ ಮತ್ತು ವನ ಸಂರಕ್ಷಣೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಕಾರ್ಕಳ ಶಾಸಕ ಸುನಿಲ್‌ಕುಮಾರ್ ಹೆಬ್ರಿಯಲ್ಲಿ ರಾಜ್ಯ ಮಟ್ಟದ ಲಕ್ಷ ವೃಕ್ಷ ಗಿಡಗಳ ನಾಟಿಗೆ ಚಾಲನೆ ನೀಡಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಜನಾಭಿವೃದ್ಧಿಯ ಕಾರ್ಯವನ್ನು ಮಾಡುತ್ತಿದೆ. ಯೋಜನೆಯ ಜನಸೇವಾ ಕಾರ್ಯ ದೇಶದ ಅತೀ ದೊಡ್ಡ ಸೇವಾ ಕಾರ್ಯ ಎನಿಸಿದ್ದು, ಲಕ್ಷ ವೃಕ್ಷ ಗಿಡಗಳ ನಾಟಿ ಮಹತ್ವದ ಕಾರ್ಯ ಎಂದರು.
ಹೆಬ್ರಿ ಅನಂತಪದ್ಮನಾಭ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆಯ ಸಂಘಟನಾ ಅದ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಯೋಜನೆಯು ಜನರಿಗೆ ಬದುಕು ಕಟ್ಟುವ ಹಲವು ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿ ಕಾರ್ಯ ನಡೆಸುತ್ತಿದೆ ಇವುಗಳಲ್ಲಿ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ ಸಹ ಒಂದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ವಿಶ್ವದ ದೊಡ್ಡ ಸೇವಾ ಸಂಸ್ಥೆಯಾಗಿದ್ದು,7.20 ಕೋಟಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನ್ಯಜೀವಿಗಳಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಇಲ್ಲಿ ಮುಂದಡಿ ಇಡಲಾಗಿದೆ ಎಂದರು.
ಬೆಳ್ತಂಗಡಿ ಮುಂಡಾಜೆಯ ಸಚಿನ್ ಭಿಡೆ ಅವರಿಗೆ ‘ಅರಣ್ಯ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಬ್ರಿ ಭಾಸ್ಕರ ಜೋಯಿಸ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೆಟ್ಟ ಗಿಡಗಳನ್ನು ಗಮನಿಸಲು ಜೀಯೋ ಟ್ಯಾಗ್ ಆ್ಯಪ್‌ನ್ನು ಬಿಡುಗಡೆಗೊಳಿಸಲಾಯಿತು.
ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಗಣಪತಿ ಸಸಿ ವಿತರಣೆ ಮಾಡಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮೂಡಬಿದರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಹೆಬ್ರಿ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ರೇವತಿ, ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾ ಸಂಘಟನಾ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ವಿವೇಕ ವಿ. ಪಾಯಸ್, ಮನೋಜ್ ಮಿನೇಜಸ್, ಹೆಬ್ರಿ ವಲಯ ಅರಣ್ಯಾಧಿಕಾರಿ ಮಂಜುಳಾ ಸಿದ್ಧಪ್ಪ, ಯೋಜನೆಯ ವಿವಿಧ ಪ್ರಮುಖರು, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ, ಯೋಜನಾಧಿಕಾರಿ ಗಣೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ವಂದಿಸಿದರು.