×
Ad

ದಲಿತರಿಗೆ ಭೂಮಿ ವಿಚಾರದಲ್ಲಿ ಶೋಷಣೆ: ಸುಂದರ್ ಮಾಸ್ತರ್

Update: 2025-07-13 18:13 IST

ಕುಂದಾಪುರ: ಕಂದಾಯ ಅದಾಲತ್ ದಲಿತರ ಬದುಕಿನ ಹಕ್ಕು. ತುಂಡುಭೂಮಿ ಇದ್ದವರು ಮುಂದೆ ಬದುಕು ಕಟ್ಟಿಕೊಳ್ಳಬಹುದು. ಹೀಗಾಗಿ ಭೂಮಿ ಅನಿವಾರ್ಯ. ಭೂಮಿಯಿಲ್ಲದವರ ಬದುಕು ಅತಂತ್ರ ವಾಗಲಿದೆ. ದಲಿತರಿಗೆ ಭೂಮಿ ವಿಚಾರದಲ್ಲಿ ಶೋಷಣೆಯಾಗುತ್ತಿದೆ. ಶೋಷಿತ ಜನರ ಭೂಮಿ ಹಕ್ಕಿಗಾಗಿ ಮುಂದೆಯೂ ಹೋರಾಟಗಳು ನಿಶ್ಚಿತ. ಸಂಘಟಿತರಾದಾಗ ಮಾತ್ರ ಹಕ್ಕುಗಳು ಸಿಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಮಿತಿ ವತಿಯಿಂದ ರವಿವಾರ ಕುಂದಾಪುರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಶೋಷಿತ ಸಮುದಾಯಗಳ ಭೂಮಿ ಹಕ್ಕಿಗಾಗಿ ’ಕುಂದಾಪುರ ತಾಲೂಕು ದಲಿತ ಕಂದಾಯ ಅದಾಲತ್’ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದಲಿತ ಸಮುದಾಯಕ್ಕೆ ಭೂಮಿ ಸಿಕ್ಕಿದಲ್ಲಿ ಭವಿಷ್ಯದ ಮಂದಿ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ರಾಜ್ಯದಲ್ಲಿಯೂ ಭೂಮಿ, ವಸತಿಗಾಗಿ ಹೋರಾಟ ನಡೆಯುತ್ತಿದೆ. ಜು.18ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ, ಮನವಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಭೂಮಿಗಾಗಿ 5 ನಮೂನೆ ಅರ್ಜಿ ಹಾಕಿದ್ದರೂ ವಿಲೇವಾರಿಯಾಗದೇ ನ್ಯಾಯ ಸಿಗದಿದ್ದು ಇದಕ್ಕೆ ಒಗ್ಗಟ್ಟಿನ ಕೊರತೆ, ಅಕ್ರಮ ಸಕ್ರಮ ಕಮಿಟಿಯಲ್ಲಿರುವ ವ್ಯಕ್ತಿಗಳು, ತಿಳುವಳಿಕೆಯಿಲ್ಲದ ಪ್ರತಿನಿಧಿಗಳಿಂದ ದಲಿತರ ಅರ್ಜಿ ಬಾಕಿ ಯಾಗುತ್ತಿದೆ. ಆದರೆ ಇತರರಿಗೆ ರಾಜಕೀಯ ಪ್ರಭಾವದಿಂದ ಜಾಗ ಮಂಜೂರಾಗುತ್ತಿರುವುದು ದುರಂತ. ರಾಜಕೀಯದವರು, ಪಕ್ಷದವರು ಜಾಗ ಮಾಡಿಸಿಕೊಡುತ್ತಾರೆಂಬುದು ಕನಸಿನ ಮಾತು. ಹಲವಾರು ವರ್ಷಗಳಿಂದ ಅರ್ಜಿಗಳು ಬಾಕಿಯಿದೆ. ಸರಕಾರ, ಅಧಿಕಾರಿಗಳ ವಿರುದ್ಧ ದಲಿತರು ಧ್ವನಿಯೆ ತ್ತಬೇಕು, ಅಗತ್ಯವಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.

ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಎಂದಿದ್ದಾರೆ. ಶಿಕ್ಷಣ ಜ್ಞಾನ ನೀಡಿದರೆ ಭೂಮಿಯು ಒಂದು ನಿಶ್ಚಿತ ಬದುಕು ಕಟ್ಟಿಕೊಡುತ್ತದೆ. ಜಿಲ್ಲೆಯಲ್ಲಿ ಡಿಸಿ ಮನ್ನಾಭೂಮಿ ಮೇಲ್ವರ್ಗದವರಿಂದ ಕಬಳಿಕೆಯಾಗಿದ್ದು ಇದಕ್ಕೆ ರಾಜಕೀಯ ಪ್ರತಿನಿಧಿಗಳು ನೇರ ಕಾರಣ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಘಟಿತ ಹೋರಾಟ ನಡೆಸಲಾಗು ವುದು ಎಂದು ತಿಳಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ್ ಹಕ್ಲಾಡಿ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ ನಾಗೂರು, ಜಿಲ್ಲಾಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಕುಮಾರ್ ಕೋಟ, ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ಗೀತಾ ಸುರೇಶ್, ತಾಲೂಕು ಸಂಘಟನಾ ಸಂಚಾಲಕಿ ಭವಾನಿ ನಾಯ್ಕ್, ಜ್ಯೋತಿ ರಟ್ಟಾಡಿ, ದಸಂಸ ಬೈಂದೂರು ತಾಲೂಕು ಸಂಚಾಲಕ ಶಿವರಾಜ್, ಬ್ರಹ್ಮಾವರ ತಾಲೂಕು ಸಂಚಾಲಕ ಹರಿಶ್ಚಂದ್ರ, ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ, ಮಹಿಳಾ ಸಂಚಾಲಕಿ ಕುಸುಮಾ ಕುಂದಾಪುರ, ತಾಲೂಕು ಸಂಘಟನಾ ಸಂಚಾಲಕರಾದ ಸತೀಶ್ ರಾಮನಗರ, ಶ್ರೀಕಾಂತ ಹಿಜಾಣ, ಉದಯ ಕೋಳೂರು, ಅಶೋಕ್ ಮೊಳಹಳ್ಳಿ, ಭಾಸ್ಕರ್ ಕುಂಟೋಳಿ, ಚಂದ್ರ ಉಳ್ಳೂರು, ಪ್ರಶಾಂತ ಹೈಕಾಡಿ, ನಿವೃತ್ತ ಎಲ್‌ಐಸಿ ನೌಕರ ಗೋಪಾಲ್ ಮೊದಲಾದವರಿದ್ದರು.

ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ್ ಗಿಳಿಯಾರು ಪ್ರಸ್ತಾವಿಸಿಕವಾಗಿ ಮಾತನಾಡಿ ದರು. ತಾಲೂಕು ಪ್ರಧಾನ ಸಂಚಾಲಕ ರಾಜು ಕೆ.ಸಿ. ಬೆಟ್ಟಿನಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ದಲಿತ ಸಮುದಾಯದವರನ್ನು ಭೂಮಿಹಕ್ಕಿನಿಂದ ದೂರವಿಟ್ಟಿದ್ದಾರೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ ಮೊದಲು ಭೂಮಿ ಹಂಚಿಕೆ ಮಾಡಬೇಕೆಂಬ ಸರಕಾರದ ಸುತ್ತೋಲೆಯನ್ನು ಮೀರಿ ರಾಜಕೀಯ, ಜಾತಿ ಪ್ರಭಾವ, ಹಣವಂತರಿಗೆ ಎಕರೆ ಗಟ್ಟಲೆ ನೀಡಲಾಗಿದೆ. ಇದರಿಂದ ದಲಿತರು, ಶೋಷಿತರಿಗೆ ಜಾಗ ಸಿಗದಾಗಿದೆ. ಹೀಗಾಗಿ ಕರ್ನಾಟಕ ದಸಂಸ ವತಿಯಿಂದ ಕಂದಾಯ ಅದಾಲತ್ ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ್ ಗಿಳಿಯಾರು ತಿಳಿಸಿದರು.

ಭೂಮಿ ಹಕ್ಕಿಗಾಗಿ ನಮೂನೆ 50, 53, 57, 94ಸಿ, 94ಸಿಸಿ ಅರ್ಜಿಕೊಟ್ಟವರ ಅರ್ಜಿ ವಜಾ ಮಾಡಿರು ವುದು, ಬಾಕಿಯಿಟ್ಟಿರುವ ಮಾಹಿತಿ ಪಡೆದು ಎಲ್ಲಾ ಅರ್ಜಿಗಳನ್ನು ಕ್ರೋಡೀಕರಿಸಿ ತಹಶಿಲ್ದಾರ್‌ಗೆ ಮನವಿ ನೀಡಿ ದಲಿತರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಲಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ. ದಲಿತರ ಭೂಮಿ ಹಕ್ಕನ್ನು ಪ್ರಥಮ ಆದ್ಯತೆಯಡಿ ಶೀಘ್ರ ನೀಡಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News