×
Ad

ಪರಶುರಾಮಮೂರ್ತಿ ಕಂಚೊ, ಹಿತ್ತಾಳೆಯೋ ಎಂಬ ಚರ್ಚೆ ಮಾಡಲ್ಲ: ಶಾಸಕ ಸುನೀಲ್ ಕುಮಾರ್

Update: 2025-07-15 18:49 IST

ಉಡುಪಿ, ಜು.15: ಬೈಲೂರು ಪರಶುರಾಮ ಥೀಂ ಪಾರ್ಕ್‌ನಲ್ಲಿ ನಿರ್ಮಿಸಲಾದ ಪರಶುರಾಮ ಮೂರ್ತಿ ವಿಚಾರದಲ್ಲಿ ವಾದ ವಿವಾದ ಅಗತ್ಯವಿಲ್ಲ. ಮೂರ್ತಿ ಹಿತ್ತಾಳೆಯೊ ಅಥವಾ ಕಂಚಿನದ್ದೊ ಎಂಬುದರ ಬಗ್ಗೆ ನಾನು ಚರ್ಚೆಗೆ ಹೋಗಲ್ಲ. ಯಾಕೆಂದರೆ ನಾನು ಲೋಹತಜ್ಞ ಅಲ್ಲ. ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದ್ದರೆ ತನಿಖೆ ಮಾಡಲಿ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಪರಶುರಾಮ ಮೂರ್ತಿ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಕುರಿತು ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪರಶುರಾಮ ಮೂರ್ತಿ ಕಂಚಿನದ್ದೊ ಅಥವಾ ಹಿತ್ತಾಳೆಯದ್ದೋ ಎಂಬುದಕ್ಕೆ ಅಧಿಕಾರಿಗಳು ಉತ್ತರ ಕೊಡಬೇಕು. ಈ ಕುರಿತು ಒಪ್ಪಂದ(ಅಗ್ರಿಮೆಂಟ್) ಮಾಡಿಕೊಂಡಿರುವುದು ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾಧಿಕಾರಿಗಳು. ಒಪ್ಪಂದದಲ್ಲಿ ಯಾವುದೇ ವ್ಯಾತ್ಯಾಸ ಆಗಿದ್ದರೆ ತನಿಖೆ ಆಗಲಿ. ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಹೊಸ ಪರಿಕಲ್ಪನೆಯೊಂದಿಗೆ ಥೀಮ್ ಪಾರ್ಕ್ ನಿರ್ಮಾಣ ಮಾಡಿದ್ದೆವು. ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ವಿನಾಕಾರಣ ಆರೋಪ ಮಾಡಿದೆ. ಪರಶುರಾಮನ ಮೂರ್ತಿಯನ್ನು ಫೈಬರ್ ಎಂದು ಸುಳ್ಳು ಹೇಳಿದರು. ಮೂರ್ತಿಯನ್ನು ಮೊದಲು ಸಿಮೆಂಟ್ ಎಂದು ಹೇಳಿದರು. ಆಮೇಲೆ ಪ್ಲಾಸ್ಟಿಕ್ ಅಂದರು. ನಂತರ ಫೈಬರ್ ಎಂದು ಹೇಳಿದರು. ಮತ್ತೆ ಜಿಎಸ್‌ಟಿ ಸರಿ ಇಲ್ಲ ಎಂದರು. ಹೀಗೆ ಕಾಂಗ್ರೆಸ್ ಎರಡು ವರ್ಷ ಕಾಲ ಹರಣ ಮಾಡಿದೆ. ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಎಲ್ಲವೂ ಸ್ಪಷ್ಟವಾಗಿದೆ. ಕಾಂಗ್ರೆಸ್‌ನ ಫೈಬರ್ ಎಂಬ ಆರೋಪ ಸುಳ್ಳಾಗಿದೆ. ಫೈಬರ್ ಅಲ್ಲ ಹಿತ್ತಾಳೆ ಎಂಬುದು ತನಿಖೆಯಿಂದ ಸ್ಪಷ್ಟಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಕಳದ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಕಾಂಗ್ರೆಸ್ ಹಾಳು ಮಾಡಿದೆ. ಸ್ಥಳೀಯ ನಾಯಕರ ಆರೋಪ ಕೇಳಿ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಈ ಕುರಿತು ಟೀಕಿಸಿದರು. ಕಟ್ಟುಕಥೆಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಸೋಲಾಗಿದೆ. ಸಿದ್ದರಾಮಯ್ಯ ಸರಕಾರ ವಿಪಕ್ಷಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತ ಬಂದಿದೆ. ತನಿಖೆ ನೆಪದಲ್ಲಿ ಟಾರ್ಗೆಟ್ ಮಾಡುವ ಪ್ರಯತ್ನ ಇಡೀ ರಾಜ್ಯದಲ್ಲಿ ನಡೆದಿದೆ ಎಂದು ಅವರು ಆರೋಪಿಸಿದರು.

ಎಲ್ಲ ವಿಚಾರಗಳು ನ್ಯಾಯಾಲಯದಲ್ಲಿ ತನಿಖೆ ಮಾಡಲಿ. ಸರಕಾರ ಬಾಕಿ ಉಳಿಸಿಕೊಂಡ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಮೂರ್ತಿಯ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡಬೇಕು. ಆದರೆ ಕಾಂಗ್ರೆಸ್ ಈ ವಿಚಾರವನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News