×
Ad

ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಸಾಧ್ಯತೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

Update: 2025-07-15 19:44 IST

ಫೈಲ್‌ ಫೋಟೊ 

ಉಡುಪಿ, ಜು.15: ಭಾರತೀಯ ಹವಾಮಾನ ಇಲಾಖೆಯ ತಿರುವನಂತಪುರ ಕೇಂದ್ರ ನೀಡಿರುವ ಮುನ್ಸೂಚನೆಯಂತೆ ಲಕ್ಷದ್ವೀಪ, ಕೇರಳ ಹಾಗೂ ಕರ್ನಾಟಕ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ 40-50, ಕೆಲವೊಮ್ಮೆ ಗಂಟೆಗೆ 60ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜುಲೈ 18ರವರೆಗೆ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಅಲ್ಲದೇ ಸಾಂಪ್ರದಾಯಿಕ ಮೀನುಗಾರರು ಸಮುದ್ರ ದಡದಲ್ಲಿ ನಿಲ್ಲಿಸಿಟ್ಟಿರುವ ತಮ್ಮ ದೋಣಿ ಮತ್ತು ಬಲೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳುವಂತೆ ಅದು ತಿಳಿಸಿದೆ. ನಾಡದೋಣಿ, ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಹಾಗೂ ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಿ ಸುರಕ್ಷಿತ ಮೀನುಗಾರಿಕೆಯನ್ನು ಕೈಗೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಕರಾವಳಿಯ ಬಂದರುಗಳಲ್ಲಿ -ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ- ಸ್ಥಳೀಯವಾಗಿ ನಂ.2 ಎಚ್ಚರಿಕೆಯ ಸೂಚನೆಯನ್ನು ಹಾರಿಸುವಂತೆಯೂ ಹವಾಮಾನ ಇಲಾಖೆ ತಿಳಿಸಿದೆ.

ಬಿರುಸುಗೊಂಡ ಮಳೆ: ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದು ಮುಂಗಾರು ಮಳೆ ತೀವ್ರಗೊಂಡಿದೆ. ಬೆಳಗಿನಿಂದ ಆಗಾಗ ಜೋರಾದ ಮಳೆ ಸುರಿಯುತಿದೆ. ಆದರೆ ಸದ್ಯಕ್ಕೆ ಇದರೊಂದಿಗೆ ಗಾಳಿ ಬೀಸುತ್ತಿಲ್ಲವಾದ ಕಾರಣ ಹೆಚ್ಚಿನ ಅಪಾಯದ ಮುನ್ಸೂಚನೆ ಗೋಚರಿಸಿಲ್ಲ.

ಇಂದು ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 74.9ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಕುಂದಾಪುರದಲ್ಲಿ ಅತ್ಯಧಿಕ 97.4ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 93.9ಮಿ.ಮೀ.ಮಳೆ ಬಿದ್ದಿದೆ. ಹೆಬ್ರಿಯಲ್ಲಿ 81ಮಿ.ಮೀ.ಮಳೆಯಾಗಿದೆ.

ಇಂದು ಎರಡು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಕಾಪು ತಾಲೂಕು ಕಳತ್ತೂರಿನ ಗೋಪ ಮುಖರಿ ಎಂಬವರ ಮನೆ ಮೇಲೆ ಮರ ಬಿದ್ದು 20ಸಾವಿರ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದ್ದರೆ, ಕುಂದಾಪುರ ತಾಲೂಕು ಮೊಳಹಳ್ಳಿಯಲ್ಲಿ ಸಾದಮ್ಮ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು 25ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News