×
Ad

ಉಡುಪಿ| ಮಹಿಳೆಯ ಜಾತಿನಿಂದನೆ ಆರೋಪ: ಪೋಕ್ಸೊ ವಿಶೇಷ ಪಿಪಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Update: 2025-07-16 22:09 IST

ಉಡುಪಿ, ಜು.16: ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಸಹಿತ ಮೂವರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣವೊಂದರ ಸಂತ್ರಸ್ತೆ ನೀಡಿದ ದೂರಿನಂತೆ ಉಡುಪಿ ಮಹಿಳಾ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರದ ಹಾವಂಜೆ ಗ್ರಾಮದ ಕೊಳಲಗಿರಿಯ ನಿವಾಸಿ ಸಂತ್ರಸ್ತ ಯುವತಿ ಹಾಗೂ ಸಂಜಯ್ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಅವಧಿಯಲ್ಲಿ 2024ರ ಜು.11 ಹಾಗು ನ.17ರಂದು ಯುವತಿಯನ್ನು ತಿರುಗಾಡಲೆಂದು ಕರೆದುಕೊಂಡು ಹೋಗಿ, ಖಾಸಗಿ ಹೊಟೇಲಿನಲ್ಲಿ ರೂಮ್ ಮಾಡಿ, ದೈಹಿಕ ಸಂಪರ್ಕ ಬೆಳೆಸಿದ್ದನು. ಮದುವೆಯಾಗುವುದಾಗಿ ನಂಬಿಸಿ ಆತ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ನೀಡಿದ ದೂರಿನಂತೆ ಆರೋಪಿ ವಿರುದ್ಧ 2025ರ ಜೂ.30ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ವೈ.ಟಿ.ರಾಘವೇಂದ್ರ ತನ್ನ ಕಚೇರಿಗೆ ಸಂತ್ರಸ್ತ ಯುವತಿಯನ್ನು ಕರೆಸಿ, ಸಂಜಯ್ ವಿರುದ್ಧ ದೂರು ಕೊಟ್ಟರೆ ಸರಿ ಇರುವುದಿಲ್ಲ, ನಿನ್ನ ವಿರುದ್ಧ ಉಡುಪಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕೇಸ್ ಹಾಕುತ್ತೇನೆ ಎಂದು ಗದರಿಸಿದ್ದಾರೆ. ವೈಟಿ ರಾಘವೇಂದ್ರ ಹಾಗು ಮನೋಜ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿ ನನ್ನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿ ತೊಂದರೆ ಮಾಡಿದ್ದಾರೆ. ಇಬ್ಬರು ಸೇರಿಕೊಂಡು ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ತಲೆಮರೆಸಿಕೊಳ್ಳಲು ಸಹಾಯ ಮಾಡಿ, ಆತನ ವಿರುದ್ಧ ದೂರು ದಾಖಲಿಸದಂತೆ ಒತ್ತಡ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

2017ರಲ್ಲಿ ವೈ.ಟಿ.ರಾಘವೇಂದ್ರ ಅವರ ಉಡುಪಿ ನಗರದ ಕಚೇರಿಯಲ್ಲಿ ಯುವತಿ ಕರ್ತವ್ಯ ನಿರ್ವಹಿಸುತ್ತಿ ದ್ದಾಗ ಆತ ಆಕೆಗೆ ಕೀಳು ಜಾತಿಯವಳೆಂದು ನಿಂದನೆ ಮಾಡುತ್ತಿದ್ದರು. ಮನೆಯಿಂದ ನೀರು ತರಲು ತಿಳಿಸುತ್ತಿದ್ದು, ಊಟ ಮಾಡುವಾಗ ಕಚೇರಿಯ ಇತರ ಸಿಬ್ಬಂದಿಯವರನ್ನು ಹೊರತುಪಡಿಸಿ ತನ್ನನ್ನು ಮಾತ್ರ ಹೊರಗೆ ಕಳುಹಿಸುತ್ತಿದ್ದರು ಎಂದು 2025 ಜು.15 ರಂದು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ವೈ.ಟಿ.ರಾಘವೇಂದ್ರ, ಮನೋಜ್ ಮತ್ತು ಸಂಜಯ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News