ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಜನರ ಮಧ್ಯೆ ಗೊಂದಲ ಸೃಷ್ಠಿ: ಜಯಪ್ರಕಾಶ್ ಹೆಗ್ಡೆ
ಉಡುಪಿ : ಕುಂಜಾಲು ದನದ ತಲೆ ಪತ್ತೆಯಾಗಿರುವ ಪ್ರಕರಣವನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಂಡು ಬಿಜೆಪಿ ಪ್ರತಿಭಟನೆಯನ್ನು ನಡೆಸಿತು. ಬಿಜೆಪಿ ಜನರ ಮಧ್ಯೆ ಗೊಂದಲಗಳನ್ನು ಸೃಷ್ಠಿಸಿ ಅದರ ಲಾಭ ರಾಜಕೀಯವಾಗಿ ಪಡೆಯಲು ಪ್ರಯತ್ನಿಸುತ್ತಿದೆ. 2014ರ ಮೊದಲು ಈ ರೀತಿ ಜಾತಿ, ಧರ್ಮಗಳ ಮಧ್ಯೆ ಗೊಂದಲ ಸೃಷ್ಠಿ ಮಾಡಿ ರಾಜಕೀಯ ಲಾಭವನ್ನು ಪಡೆಯುವ ಯಾವುದೇ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ ಎಂದು ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ 9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಜನತೆಗೆ ವಾಸ್ತವ ವಿಚಾರ ತಿಳಿಸುವ ಮತ್ತು ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಸೋಮವಾರ ಉಡುಪಿ ತಾಲೂಕು ಕಚೇರಿ ಎದುರು ಹಮ್ಮಿಕೊಳ್ಳಲಾದ ಕಾಂಗ್ರೆಸ್ ಪಕ್ಷದ ಸತ್ಯದರ್ಶನ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಬಿಜೆಪಿ ತನ್ನ ಅವಧಿಯಲ್ಲಿ ಮಾಡಿದ ತಪ್ಪು ಕೆಲಸಗಳನ್ನು ಕಾಂಗ್ರೆಸ್ ಪಕ್ಷದ ಮೇಲೆ ಹೊರಿಸುತ್ತಿದೆ. 2014ರಲ್ಲಿ ಮಂಜೂರಾದ ತೀರ್ಥಹಳ್ಳಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಸಂಪೂರ್ಣ ಆಗಿಲ್ಲ. ಇಂದ್ರಾಳಿ ಸೇತುವೆ ಕಾಮಗಾರಿ ಇನ್ನೂ ಮುಗಿದಿಲ್ಲ. ದೂಷಣೆ ಮಾಡುವುದು ಮತ್ತು ಸುಳ್ಳು ಹೇಳು ವುದನ್ನೇ ಬಿಜೆಪಿ ಕರಗತ ಮಾಡಿಕೊಂಡಿದೆ. ನಿರುದ್ಯೋಗ ಸಮಸ್ಯೆ ಪರಿಹಾರವೇ ಆಗಿಲ್ಲ. ಆ ಬಗ್ಗೆ ಬಿಜೆಪಿಯವರು ಚರ್ಚೆ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಕಾಂಗ್ರೆಸ್ ವಿರುದ್ಧ ಎಲ್ಲ ಗ್ರಾಪಂ ಎದುರು ಪ್ರತಿಭಟನೆ ಮಾಡಿ, ಸುಳ್ಳು ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ. ಈ ರೀತಿ ಸುಳ್ಳು ಹರಡಲು ಬಿಜೆಪಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನೇ ಬಳಸಿಕೊಳ್ಳುತ್ತಿದೆ. ಅವರಿಗೆ ಬಿಜೆಪಿ ಈ ಗ್ಯಾರಂಟಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತೇ ಇಲ್ಲ. ನರೇಂದ್ರ ಮೋದಿ ಚುನಾ ವಣೆ ಪೂರ್ವದಲ್ಲಿ ಹೇಳಿದ ಯಾವುದೇ ಭರವಸೆಯನ್ನು ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಕ್ಕೆ ತರಲಿಲ್ಲ. ಕೇವಲ ಪ್ರಚಾರಕ್ಕಾಗಿಯೇ ಕಾರ್ಯಕ್ರಮಗಳನ್ನು ಮಾಡುತ್ತಾರೆ ಎಂದರು.
ಈ ದೇಶದ ಶೇ.೫೦ರಷ್ಟು ಸಂಪತ್ತು ಶೇ.೧ರಷ್ಟು ಮಂದಿಯ ಕೈಯಲ್ಲಿದೆ. ಆ ಮೂಲಕ ಮೋದಿ ಸರಕಾರ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತಿದೆ. ಅದು ಬಿಟ್ಟರೆ ಜನಸಾಮಾನ್ಯರು, ಬಡವರಿಗೆ ಮೋದಿ ಸರಕಾರ ಯಾವುದೇ ಹಣ ಕೊಡುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು, ರೈತರು, ಕಾರ್ಮಿಕರ ಬದುಕು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಬಿಜೆಪಿ ಪಕ್ಷ ಅದರ ಹುಟ್ಟು ಸುಳ್ಳಿನಿಂದ ಪ್ರಾರಂಭವಾಗಿದೆ. ಸುಳ್ಳು ಮಾತನಾಡಿ ಜನರನ್ನು ಮರಳು ಮಾಡಿ ದೇಶದ ಚುಕ್ಕಾಮಿ ಹಿಡಿದಿದ್ದಾರೆ. ಇವತ್ತು ಕೂಡ ಸುಳ್ಳಿನಿಂದಲೇ ಸಂಘಟನೆ ಮಾಡುತ್ತಾರೆಂಬ ಭ್ರಮೆಯಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ಜನರನ್ನು ಸುಳ್ಳಿನಿಂದ ಮರಳು ಮಾಡಿಲ್ಲ. ಸದಾ ಕಾಲ ಈನ ದೇಶದ ಹಬಡವರ ಬಗ್ಗೆ ತುಳಿತಕ್ಕೆ ಒಳಗಾದ ಬದುಕು ಕಟ್ಟುವ ಕೆಲಸ ಮಾಡುತ್ಚಿದೆ. ಬಿಜೆರಿ ಪಕತ್ಷ ದೇಶದ ಹಡವರಕಿಗೆ ಮೋಸ ಮಾಡುತ್ತಿದೆ.
ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಅಮೃತ್ ಶೆಣೈ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್, ಮುಖಂಡರಾದ ವರೋನಿಕಾ ಕರ್ನೆಲಿಯೋ, ಅಣ್ಣಯ್ಯ ಶೇರಿಗಾರ್, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಅಮೃತಾ ಕೃಷ್ಣಮೂರ್ತಿ, ಶರ್ಫುದ್ದೀನ್ ಶೇಕ್, ಗಮೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.
‘ದೇಶದಲ್ಲಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ 3.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಕೇಂದ್ರದಲ್ಲಿ ಹಣ ಇಲ್ಲ. ಆದರೆ ಬಂಡಾವಳಶಾಹಿಗಳ, ಕೈಗಾರಿಕೋದ್ಯಮಿ ಗಳ 14500ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರಕಾರದಲ್ಲಿ ಹಣ ಇದೆ. ಇವರಿಗೆ ರೈತರು ಮುಖ್ಯವೇ ಅಲ್ಲ’
-ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು