ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ: ಕೃಷಿಕರಿಗೆ ಸನ್ಮಾನ
ಉಡುಪಿ: ಸರಕಾರವಲ್ಲದೆ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವಜನತೆ ಅಭಿವೃದ್ಧಿಯ ದಾರಿ ಕಂಡುಕೊಳ್ಳಬೇಕು ಎಂದು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯ ಸಮಿತಿ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕರಂಬಳ್ಳಿ ವಲಯ ಘಟಕ, ಕರಂಬಳ್ಳಿ ಬ್ರಾಹ್ಮಣ ಸಮಿತಿ ಮತ್ತು ಶ್ರೀವೆಂಕಟರಮಣ ದೇವಸ್ಥಾನ ಸಹಯೋಗದೊಂದಿಗೆ ಕರಂಬಳ್ಳಿ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಮಾಜಿ ಶಾಸಕ ರಘಪತಿ ಭಟ್ ಉದ್ಘಾಟಿಸಿದರು. ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ಅರ್ಚಕ ದಿವಾಕರ ಐತಾಳ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಸಮಿತಿಯ ಅಧ್ಯಕ್ಷ ಕೃಷ್ಣರಾಜ ಭಟ್, ಪ್ರಗತಿಪರ ಕೃಷಿಕ ಶಶಿಧರ ರಾವ್ ಪೆರಂಪಳ್ಳಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಇರುವ ಜಮೀನಿನ ಮಿತಿಯಲ್ಲೇ ಕಡಿಮೆ ಶ್ರಮ, ಕಡಿಮೆ ನೀರು, ಗೊಬ್ಬರ ಬಳಸಿ ತಂಗು, ಅಡಿಕೆ, ಬಾಳೆ ಮತ್ತು ಮಲ್ಲಿಗೆ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ, ಕೃಷಿಕ ಸಂಘ ಪೆರಂಪಳ್ಳಿ ವಲಯ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಭತ್ತ ಮತ್ತು ಹೈನುಗಾರಿಕೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕರಂಬಳ್ಳಿಯ ಪ್ರಗತಿಪರ ಕೃಷಿಕರು ಗಳಾದ ಸತೀಶ್ ಶೆಟ್ಟಿ, ರಘುರಾಮ ಶೆಟ್ಟಿ, ಚಂದ್ರಶೇಖರ, ಬಾಲಚಂದ್ರ ಕೆ., ಕಮಲಾ ಪಾಟೀಲ್ ದೊಡ್ಡಣಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ತೆಂಗು, ಅಡಿಕೆ, ಬಾಳೆ, ಕಾಫಿ, ಲಕ್ಷ್ಮಣ ಫಲ ಮೊದಲಾದ ಗಿಡಗಳನ್ನು ವಿತರಿಸಲಾಯಿತು. ನಾಗರಾಜ ಭಟ್, ರಮೇಶ್ ಬಂಗೇರಾ ಹೊಗೆ ಕುದ್ರು, ಆಶಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಿಯಂವದಾ ಐತಾಳ್ ಸ್ವಾಗತಿಸಿದರು. ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯಾಧ್ಯಕ್ಷ ಕೆ.ಶ್ರೀಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಸಾಮಗ ವಂದಿಸಿದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.