ಬೈಂದೂರು: ಸೋಮೇಶ್ವರ ಮಾರ್ಗದಲ್ಲಿ ಸರಕಾರಿ ಬಸ್ಸಿಗಾಗಿ ಧರಣಿ
ಬೈಂದೂರು, ಜು.29: ಕಟ್ಟಡ ಕಾರ್ಮಿಕರ ಮಹಿಳಾ ಉಪಸಮಿತಿ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೈಂದೂರು, ಸೋಮೇಶ್ವರ, ದೊಂಬೆ, ಕರಾವಳಿ ಮಾರ್ಗವಾಗಿ ಶಿರೂರಿಗೆ ಸರಕಾರಿ ಬಸ್ ವ್ಯವಸ್ಥೆ ಮಾಡಿ ಮಹಿಳೆ ಯರಿಗೆ, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಇಂದು ಶಿರೂರು ಗ್ರಾಮ ಪಂಚಾಯತ್ ಎದುರು ಶಿರೂರು ನಾಗರಿಕರಿಂದ ಧರಣಿ ನಡೆಯಿತು.
ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ಸಿನ ಸೇವೆ ಹಾಗೂ ಅದರಲ್ಲಿ ಬಡ ಜನರಿಗೆ ಸಿಗುವ ಸೌಲಭ್ಯಗಳನ್ನು ವಂಚಿತರಾದ ಜನರಿಗೆ ಸಿಗಬೇಕು ಎಂದು ಹೋರಾಟ ನಡೆಯುತ್ತಿದ್ದರೂ ಜಿಲ್ಲಾ ಸಾರಿಗೆ ಪ್ರಾಧಿಕಾರ ಕಾಳಜಿ ವಹಿಸುತ್ತಿಲ್ಲ. ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಪರಮಾಧಿಕಾರ ಇರುವುದರಿಂದ ಜನರಿಗೆ ಅನುಕೂಲ ವಾಗುವ ಸರಕಾರಿ ಬಸ್ಸು ಗ್ರಾಮೀಣ ಪ್ರದೇಶಗಳಿಗೆ ಆರಂಭಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಮಾತನಾಡಿ, ಶಿರೂರು ಮಹಿಳೆ ಯರಿಗೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗದಿದ್ದರೆ ಉಡುಪಿ ಸಾರಿಗೆ ಇಲಾಖೆ ಎದುರು ಧರಣಿ ನಡೆಸಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ ಮಾತನಾಡಿ ದರು. ಬೈಂದೂರು ಕಟ್ಟಡ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್, ಪದಾಧಿಕಾರಿಗಳಾದ ಶ್ರೀಧರ ದೇವಾಡಿಗ ಉಪ್ಪುಂದ, ಗೊಪಾಲ ಕೃಷ್ಣ, ರೋನಿ ನಜರೆತ್ ಹಾಗೂ ಸಿಡಬ್ಲ್ಯೂಎಫ್‌ಐ ರಾಜ್ಯ ಸಮಿತಿ ಸದಸ್ಯ ರಮೇಶ್ ಗುಲ್ವಾಡಿ, ಪದ್ಮಾವತಿ ಶಿರೂರು, ಶಾಂತಾ ಉಪ್ಪುಂದ ಮತ್ತು ನಾಗರತ್ನ ಪಡುವರಿ ಉಪಸ್ಥಿತರಿದ್ದರು.
ಶಿರೂರು ಪಂಚಾಯತ್ ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಜೊತೆ ಮನವಿ ಸ್ವೀಕ ರಿಸಿ ಪಂಚಾಯತ್ ಮೂಲಕ ನಿರ್ಣಯ ಅಂಗೀಕರಿಸಿ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಸಾರಿಗೆ ಇಲಾಖೆಯ ಅಧಿಕಾರಿಗಳೂ ಮನವಿ ಸ್ವೀಕರಿಸಿ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದರು.