ಅಂಬೇಡ್ಕರ್‌ರಿಂದ ಮಹಿಳೆಯರಿಗೆ ಸ್ವಾಭಿಮಾನದ ಬದುಕು: ಡಾ.ಪ್ರತಿಭಾ
ಕಾಪು, ಆ.3: ಇಡೀ ಭಾರತದ ಎಲ್ಲಾ ಸಮುದಾಯದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು ಬಾಬಾಸಾಸೇಬ್ ಅಂಬೇಡ್ಕರ್. ಅಂಬೇಡ್ಕರ್ ಸಂವಿಧಾನ ಬರೆಯದೇ ಇರುತ್ತಿದ್ದರೆ ನನಗೆ ಈ ಅವಕಾಶವೇ ಸಿಗುತ್ತಿರಲಿಲ್ಲ ಎಂದು ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಕಾಪು ಪೊಲಿಪು ಕಾಂಚನ್ ಸಮುದಾಯ ಭವನದಲ್ಲಿ ರವಿವಾರ ಆಯೋಜಿಸಲಾದ ನವಚೇತನ ಸಮಾವೇಶ ಮತ್ತು ನೂತನ ಕಾಪು ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತಿದ್ದರು.
ಸಂವಿಧಾನ ರಚನಾ ಸಮಿತಿಯಲ್ಲಿದ್ದ ಒಬ್ಬೊಬ್ಬರು ಒಂದೊಂದು ಕಾರಣ ದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಸರಿದಾಗ ಬಾಬಾಸಾಸೇಬ್ ಅವರೊಬ್ಬರೇ ಹಗಲಿರುಳು ಶ್ರಮವಹಿಸಿ, ವಿಶ್ವದ ಹಲವಾರು ಸಂವಿಧಾನಗಳನ್ನು ಅಧ್ಯಯನ ನಡೆಸಿ ಈ ಪ್ರಜಾಪ್ರಭುತ್ವ ದೇಶಕ್ಕೆ ಒಂದು ಅತ್ಯಮೂಲ್ಯ ಸಂವಿಧಾನವನ್ನು ರಚಿಸಿ ಕೊಟ್ಟರು ಎಂದರು.
ಸಂವಿಧಾನ ಪೀಠಿಕೆಯಲ್ಲೇ ಸಮಾನತೆ, ಸಂಹೋದರತೆಯನ್ನು ಸೇರಿಸಿ ಈ ದೇಶದಲ್ಲಿ ಎಲ್ಲರೂ ಸಮಾ ನರು ಎಂಬ ತತ್ವವನ್ನು ಖಾತ್ರಿಪಡಿಸಿದರು. ನಮ್ಮ ಏಳಿಗೆಗೆ ನಾವೇ ಶ್ರಮಿಸಬೇಕೇ ಹೊರತು ನಮ್ಮ ಉದ್ಧಾರ ಬೇರೆಯವರು ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಇರಬಾರದು. ಹಾಗಾಗಿ ಶಿಕ್ಷಣಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿ ಎಲ್ಲರೂ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕಾಪು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಮಾತನಾಡಿ, ಇಡೀ ಸಮಾಜದಲ್ಲಿ ಮೇಲರಿಮೆಯ ವ್ಯಸನ ತುಂಬಿಕೊಂಡಿದೆ. ನಾನೇ ಶ್ರೇಷ್ಠ, ನಾನೇ ಮೇಲು ಎನ್ನುವ ವ್ಯಸನ ಪ್ರತಿಯೊಂದು ಕಡೆಯಲ್ಲೂ, ವ್ಯವಸ್ಥೆಯಲ್ಲೂ ಬೇರೂರಿ ಬಿಟ್ಟಿದೆ. ಇದನ್ನು ತೊಡೆದುಹಾಕುವ ಕೆಲಸವಾಗಬೇಕು ಎಂದು ಹೇಳಿದರು.
ಕಾಪು ಸಿ.ಎ. ಬ್ಯಾಂಕ್ ಅಧ್ಯಕ್ಷ ಕೆ.ದಿವಾಕರ ಶೆಟ್ಟಿ ಮಾತನಾಡಿ, ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಆದ ತಕ್ಷಣ ಯಾವ ಕೋರ್ಸುಗಳಿಗೆ ಹೋದರೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ಯಾವ ವಿದ್ಯಾಭ್ಯಾಸ ಮಾಡಿದರೆ ಉದ್ಯೋಗ ಗ್ಯಾರಂಟಿ ಎಂಬ ಜ್ಞಾನವನ್ನು ನಮ್ಮ ವಿದ್ಯಾರ್ಥಿಗಳ ಹೆತ್ತವರಿಗೆ ಕೊಡಬೇಕು. ಆಗ ಮಾತ್ರ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಮಾವೇಶವನ್ನು ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಉಧ್ಘಾಟಿಸಿದರು. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಧ್ಯಕ್ಷತೆಯನ್ನು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ವಹಿಸಿದ್ದರು.
ವೇದಿಕೆಯಲ್ಲಿ ಕೌನ್ಸಿಲರ್‌ಗಳಾದ ಸತೀಶ್ಚಂದ್ರ ಮೂಳೂರು, ರತ್ನಾಕರ ಶೆಟ್ಟಿ ಪಡುಮನೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ಮಂಜುನಾಥ ನಾಗೂರು, ಭಾಸ್ಕರ್ ನಿಟ್ಟೂರು, ವಿಠಲ ಉಚ್ಚಿಲ, ತಾಲೂಕು ಸಂಚಾಲಕರಾದ ರಾಜೇಂದ್ರ ಬೆಳ್ಳೆ, ಶಂಕರ್ ದಾಸ್ ಚೇಂಡ್ಕಳ, ರಾಜು ಬೆಟ್ಟಿನಮನೆ, ರಾಘವ ಕುಕುಜೆ, ಹರೀಶ್ಚಂದ್ರ ಬಿರ್ತಿ, ಶಿವರಾಜ್ ಬೈಂದೂರು ಉಪಸ್ಥಿತರಿದ್ದರು.