×
Ad

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಂಕ್ರಿಟೀಕರಣಕ್ಕೆ ಚಾಲನೆ

Update: 2025-08-03 18:01 IST

ಉಡುಪಿ, ಆ.3: ಹಲವು ಕಾರಣಗಳಿಂದ ಕಳೆದ ಏಳು ವರ್ಷಗಳಿಂದ ಪೂರ್ಣಗೊಳ್ಳದೇ ಆಮೆಗತಿಯಲ್ಲಿ ಸಾಗುತ್ತಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇದೀಗ ಅಂತಿಮ ಘಟ್ಟಕ್ಕೆ ಬಂದಿದ್ದು, ಇಂದು ಮೇಲ್ಸೇತುವೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದೆ.

2018ರಲ್ಲಿ ಆರಂಭವಾದ ಕಾಮಗಾರಿಯು ವಿವಿಧ ಕಾರಣಗಳಿಂದ ವಿಳಂಬವಾಗಿತ್ತು. ಹಲವು ಹೋರಾ ಟದ ಬಳಿಕ ಕಾಮಗಾರಿಗೆ ವೇಗ ನೀಡ ಲಾಗಿದ್ದು, 2025ರ ಮೇ 12ರಂದು ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಣೆಗೆ ಚಾಲನೆ ನೀಡಲಾಗಿತ್ತು. ಇದೀಗ 450 ಮೆಟ್ರಿಕ್ ಟನ್ ತೂಕದ ಸುಮಾರು 60 ಮೀಟರ್ ಉದ್ದದ ಗರ್ಡರ್ ಜೋಡಣೆಯ ಕಾರ್ಯ ಪೂರ್ಣಗೊಂಡಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಕಾರಣಕ್ಕಾಗಿ ಇಂದ್ರಾಳಿ ರೈಲ್ವೆ ಮೇಲ್ಸೇತು ವೆಯ ಕಾಂಕ್ರೆಟೀಕರಣ ಕಾಮಗಾರಿ ಮತ್ತಷ್ಟು ವಿಳಂಬವಾಗಿದ್ದು, ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆ ಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಮಕ್ಷಮದಲ್ಲಿ ಮೇಲ್ಸೇತುವೆ ಕಾಂಕ್ರೆಟೀಕರಣ ಮಾಡುವ ಕಾಮಗಾರಿಯನ್ನು ಆರಂಭಿಸ ಲಾಗಿದೆ.

ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಸಂಸದ ಕೋಟ, ‘ಇನ್ನು ಮುಂದೆ ಮಳೆ ವಿಪರೀತವಾಗಿ ಬಾರದಿದ್ದಲ್ಲಿ ಮುಂದಿನ 10ರಿಂದ 12 ದಿನಗಳಲ್ಲಿ ಕಾಂಕ್ರೀಟ್ ಕಾಮಗಾರಿ ಮುಗಿಯಲಿದೆ. ನಂತರ ಕನಿಷ್ಠ 25 ದಿನಗಳ ಅವಧಿ ಕಾಂಕ್ರೀಟಿಕರಣ ಕಾಮಗಾರಿ ಸಂಚಾರಕ್ಕೆ ಸಜ್ಜಾಗಲು ಬೇಕಾಗುತ್ತದೆ. ಆದ್ದರಿಂದ ಕಾಮಗಾರಿ ಮುಗಿಯುತ್ತಲೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿರೀಕ್ಷೆ ಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News