ಸಿದ್ಧಾಂತವನ್ನು ವಾದದಿಂದ ಗೆಲ್ಲುವುದು ಇಂದಿನ ಅಗತ್ಯ: ನ್ಯಾ.ಶ್ರೀಶಾನಂದರು
ಉಡುಪಿ, ಆ.3: ನಾವು ತಿಳಿದುಕೊಂಡ ಸಿದ್ದಾಂತವನ್ನು ವಾದ ಮಂಡಿಸು ವುದರ ಮೂಲಕ ಗೆಲ್ಲ ಬೇಕಾಗಿದೆ. ಇದು ಸಮಾಜ, ದೇಶ, ಧರ್ಮ, ಸತ್ಯವನ್ನು ಉಳಿಸುವ ದೃಷ್ಠಿಯಿಂದ ಅಂದಿಗಿಂತ ಇಂದು ಹೆಚ್ಚು ಮುಖ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದರು ಹೇಳಿದ್ದಾರೆ.
ಶ್ರೇಣಿಕೃತ ವ್ಯವಸ್ಥೆಯೇ ಬೇರೆ ತಾರತಮ್ಯವೇ ಬೇರೆ. ತಾರತಮ್ಯ ಎನ್ನುವುದೇ ಡಿಸ್ಕ್ರಿಮಿನೇಶನ್ ರೀತಿ ಮಾಡಿರುವುದರಿಂದ ಇವತ್ತು ತೊಂದರೆ ಆಗಿದೆ. ಸಿದ್ಧಾಂತಗಳನ್ನು ಇಂಗ್ಲಿಷ್‌ನಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನದ ದುಷ್ಪರಿಣಾಮಗಳಿವು ಎಂದರು.
ಸತ್ಯದರ್ಶನ ಮಾಡಿದ ಬನ್ನಂಜೆ ದಾರ್ಶನಿಕರಾದರು. ಶಾಸ್ತ್ರ ಜ್ಞಾನದಿಂದ ಹಾಗೂ ಧರ್ಮದ ಅತ್ಯುನ್ನತ ವಿಚಾರಗಳಿಂದ ಹೊರಗೆ ಹೊರಟು ಹೋದ ದೊಡ್ಡ ಯುವಕರ ಗುಂಪನ್ನು ವಾಪಾಸ್ಸು ಕರೆತರಲು ಶ್ರಮಿಸಿದ ವ್ಯಕ್ತಿ ಬನ್ನಂಜೆ ಎಂದು ಅವರು ತಿಳಿಸಿದರು.
ಬನ್ನಂಜೆ 90 ಉಡುಪಿ ನಮನ ಸಮಿತಿಯ ವತಿಯಿಂದ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾ ಚಾರ್ಯ ನೆನಪಿನ ‘ಬನ್ನಂಜೆ -90 ಉಡುಪಿ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಹಿರಿಯ ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್, ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಗೋವಿಂದಾಚಾರ್ಯ ಪ್ರತಿಷ್ಠಾನದ ಮುಖ್ಯಸ್ಥೆ ವೀಣಾ ಬನ್ನಂಜೆ, ಸಮಿತಿ ಅಧ್ಯಕ್ಷ ವಿಶ್ವನಾಥ ಶೆಣೈ, ಬನ್ನಂಜೆ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಅಸ್ಟ್ರೋ ಮೋಹನ್ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.
ಇದಕ್ಕೂ ಮುನ್ನಾ ಛಾಯಾಚಿತ್ರ ಹಾಗೂ ಬನ್ನಂಜೆ ಬಳಸುತ್ತಿದ್ದ ವಸ್ತು ಪ್ರದರ್ಶನವನ್ನು ಸಂಧ್ಯಾ ಪೈ ಉದ್ಘಾಟಿಸಿದರು. ಆರಂಭದಲ್ಲಿ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಕಾಲೇಜಿನವರೆಗೆ ನಡೆದ ಮೆರವಣಿಗೆಗೆ ಪ್ರೊ.ಕೆ.ಪಿ.ರಾವ್ ಚಾಲನೆ ನೀಡಿದರು.